ಬೆಂಗಳೂರು: ತನ್ನ ಮೇಲೆ ಸಾರ್ವಜನಿಕರು ದಾಳಿ ಮಾಡಿದ್ದಕ್ಕಾಗಿ 18 ವರ್ಷ ವಯಸ್ಸಿನ ದರೋಡೆಕೋರನೊಬ್ಬ ಪೊಲೀಸರಿಗೆ ದೂರು ನೀಡಿರುವ ವಿಲಕ್ಷಣ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ..?
ಸೆಪ್ಟೆಂಬರ್ 2ರ ಮಟ ಮಟ ಮಧ್ಯಾಹ್ನ ವೇಳೆ ದೊಮ್ಮಲೂರಿನ ರಿತೇಶ್ ಜಯಕುಮಾರ್ ದರೋಡೆಗಿಳಿದಿದ್ದಾನೆ. ಪ್ರತಾಪ ಪಾಟೀಲ ಎಂಬ ಕಾರು ಚಾಲಕನನ್ನು ತಡೆದು ಚಾಕು ತೋರಿಸಿ ಹೆದರಿಸಿದ್ದಾನೆ. ಜೊತೆಗೆ ಮೊಬೈಲ್ ಫೋನ್ ಹಾಗೂ ಚಾಲಕನ ಬಳಿಯಲ್ಲಿರುವ ಹಣ ಕೊಡುವಂತೆ ಬೆದರಿಸಿದ್ದಾನೆ. ಈ ವೇಳೆ ಚಾಲಕ ಪ್ರತಾಪ್ ಪಾಟೀಲ್ ಕಳ್ಳನನ್ನು ದೂಡಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
ಚಾಲಕನ ಕೂಗು ಕೇಳಿಸಿಕೊಂಡ ಅಲ್ಲಿದ್ದ ಜನರು ಸಹಾಯಕ್ಕಾಗಿ ಧಾವಿಸಿದ್ದಾರೆ. ಈ ವೇಳೆ ಕಳ್ಳ ರಿತೇಶ್ ಜಯಕುಮಾರ್ ಅಲ್ಲಿದ್ದ ಜನರಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಇದರಿಂದ ಹೆದರದ ಜನ ಕೂಡಲೇ ಕಳ್ಳನನ್ನು ಹಿಡಿದು ಥಳಿಸಿದ್ದಾರೆ. ಒಬ್ಬಾತ ಹೆಲ್ಮೆಟ್ ಹಾಗೂ ಲಾಂಗ್ ನಿಂದ ಹಲ್ಲೆ ಮಾಡಿದ್ದಾನೆ. ಆದರೆ, ದರೋಡೆಕೋರ ಅದ್ಹೇಗೋ ತಪ್ಪಿಸಿಕೊಂಡು ಓಡುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಕ್ಯಾಬ್ ಚಾಲಕ ಪ್ರತಾಪ್ ಪಾಟೀಲ್ ದರೋಡೆಕೋರ ರಿತೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.
BIG NEWS: ಪಾಕಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ; ಆತ್ಮಾಹುತಿ ಬಾಂಬ್ ದಾಳಿಗೆ ಐವರು ಸೈನಿಕರು ಬಲಿ
ಗಾಯಗೊಂಡ ಕಳ್ಳನನ್ನು ಪತ್ತೆ ಹಚ್ಚಿದ ಪೊಲೀಸರು ಐಪಿಸಿ ಸೆಕ್ಷನ್ 393 (ದರೋಡೆ ಮಾಡಲು ಪ್ರಯತ್ನ) ಹಾಗೂ 398ರ ( ಮಾರಕಾಯುಧ ಬಳಸಿ ದರೋಡೆಗೆ ಯತ್ನ) ಅಡಿಯಲ್ಲಿ ಕೇಸ್ ದಾಖಲಿಸಿ, ಬಂಧಿಸಲಾಗಿದೆ.
ಪ್ರತಿದೂರು ನೀಡಿದ ದರೋಡೆಕೋರ
ದರೋಡೆಕೋರನ ಬಂಧನದ ಬಳಿಕ ಆರೋಪಿ ರಿತೇಶ್ ಜಯಕುಮಾರ್ ಜನರ ವಿರುದ್ಧ ಪ್ರತಿದೂರು ನೀಡಿದ್ದಾನೆ. “ನಾನು ರಿಚ್ಮಂಡ್ ಟೌನ್ ನಲ್ಲಿ ತನ್ನ ವಾಹನದಲ್ಲಿ ಕುಳಿತಿದ್ದ ಕ್ಯಾಬ್ ಚಾಲಕನನ್ನು ಸಾಯಂಕಾಲ 4 ಗಂಟೆ ಸಮಯದಲ್ಲಿ ಚಾಕುವಿನಿಂದ ಬೆದರಿಸಿ ದರೋಡೆಗೆ ಯತ್ನಿಸಿದೆ. ನಾನು ಆತನ ಮೊಬೈಲ್ ಹಾಗೂ ಪರ್ಸ್ ನಲ್ಲಿದ್ದ ಹಣ ಕಸಿದುಕೊಳ್ಳಲು ಬಯಸಿದ್ದೆ.
ಆದರೆ ಆತ ತಪ್ಪಿಸಿಕೊಂಡು ಸಹಾಯಕ್ಕಾಗಿ ಕೂಗಿದ. ಆತನ ಕಿರುಚಾಟ ಕೇಳಿ 30ರಿಂದ 40 ಪುರುಷರು ನನ್ನನ್ನು ಸುತ್ತುವರಿದು ಥಳಿಸಿದರು. ನನ್ನ ತಲೆ, ತುಟಿಗಳು, ಕೈಗಳು ಹಾಗೂ ಕಾಲುಗಳ ಮೇಲೆ ಗಾಯಗಳಾಗಿವೆ. ಅಪರಿಚಿತ ವ್ಯಕ್ತಿಗಳು ನನಗೆ ಥಳಿಸಿದ್ದಕ್ಕಾಗಿ ಕಾನೂನು ಮೊರೆ ಹೋಗುವೆ” ಎಂದು ದೂರು ನೀಡಿದ್ದಾನೆ.
ಇದೀಗ ಪೊಲೀಸರು ದರೋಡೆಕೋರನಿಗೆ ಹಲ್ಲೆ ಮಾಡಿದ ಗುಂಪಿನ ವಿರುದ್ಧ ಸೆಕ್ಷನ್ 323 ಹಾಗೂ 341ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.