ಮಾತು ಮನಸ್ಸಿನ ಕನ್ನಡಿ ಎಂಬ ಮಾತಿದೆ. ಮಾತಿನಿಂದ ಮನುಷ್ಯನ ವ್ಯಕ್ತಿತ್ವವನ್ನು ಗುರುತಿಸುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಮಾತಿನಿಂದ ತಾವೇ ಪೇಚಿಗೆ ಸಿಲುಕಿಕೊಳ್ಳುತ್ತಾರೆ.
ತಮ್ಮ ಮಾತಿನ ಉದ್ದೇಶ ಹಾಗಿರಲಿಲ್ಲ ಎಂದು ಆಗಾಗ ಎದುರಿಗೆ ಇರುವವರನ್ನು ಅರ್ಥ ಮಾಡಿಸುವ ಅನಿವಾರ್ಯ ಎದುರಾಗುತ್ತದೆ. ಇದಕ್ಕೆಲ್ಲಾ ಕಾರಣ ಏನು?
ಮಾತು ಬಲ್ಲವನಿಗೆ ಜಗಳವಿಲ್ಲ, ಇದೊಂದು ಜನಪ್ರಿಯ ಗಾದೆ. “ಮಾತಾಡಿದರೆ ಲಿಂಗ ಮೆಚ್ಚಿ ಅಹುದಹುದು ಎನಬೇಕು” ಎಂದು ವಚನವೂ ಹೇಳುತ್ತದೆ. ಅಂದರೆ ಸರಿಯಾಗಿ ಮಾತನಾಡುವುದು ಒಂದು ಕಲೆ. ಈ ಕಲೆಯ ಕರಗತ ಆಗದೇ ಇರುವವರು ಪದೇ ಪದೇ ತಮ್ಮ ಮಾತಿಗೆ ತಾವೇ ಪೇಚಾಡುವ ಅನಿವಾರ್ಯ ತಂದುಕೊಳ್ಳಬಹುದು. ಈ ಮುಜುಗರದಿಂದ ಪಾರಾಗಬೇಕು ಅಂದರೆ ಈ ಕೆಲವು ಅಂಶಗಳನ್ನು ನೆನಪಿಡಿ.
ಬೇರೆಯವರ ಮಾತಿಗೆ ತಕ್ಷಣ ಪ್ರತಿಕ್ರಿಯೆ ಕೊಡದೇ, ಯೋಚಿಸಿ ನಂತರ ಮಾತನಾಡಿ.
ಆದಷ್ಟು ಕಡಿಮೆ ಮಾತನಾಡಿ, ಮೌನವಾಗಿ ಬೇರೆಯವರ ಮಾತಿನ ಧಾಟಿಯನ್ನು ಗಮನಿಸಿ.
ನಿಮ್ಮ ಯಾವುದೋ ಒಂದು ಮಾತು ತಪ್ಪು ತಿಳುವಳಿಕೆಗೆ ಕಾರಣವಾಗಿದ್ದರೆ, ಅದನ್ನು ಬೇರೆ ರೀತಿ ಹೇಗೆ ಹೇಳಬಹುದಿತ್ತು ಎಂದು ಆಲೋಚಿಸಿ.
ಉತ್ತಮ ಸಂವಹನ ಕಲೆಯ ಕುರಿತು ಪುಸ್ತಕಗಳನ್ನು ಹೆಚ್ಚಾಗಿ ಓದಿ.
ನಾನೇ ಮೊದಲು ಹೇಳಿಬಿಡಬೇಕು ಅಥವಾ ನನ್ನ ಮಾತೇ ಕೊನೆಯಾಗಬೇಕು ಎಂಬ ಹವಣಿಕೆ ಬೇಡ.
ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆಯಂತೆ, ಆಡಿದ ಮಾತಿಗೆ ಮರುಗದೆ ಅಂತಹ ಸಂದರ್ಭ ಮುಂದೆ ಒದಗಿದಾಗ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಮನನ ಮಾಡಿಕೊಳ್ಳಿ.
ಮಾತಾಡುವಾಗ ತಾಳ್ಮೆ ಮತ್ತು ಎಚ್ಚರ ಇರಲಿ. ಆತ್ಮವಿಶ್ವಾಸದಿಂದ ಮಾತನಾಡಿ.