ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಈ ಮಾತಿಗೆ ತದ್ವಿರುದ್ಧವಾಗಿ ವರ್ತಿಸಿದ್ದಾನೆ. ದೆಹಲಿಯ ಕರಾಲಾದ ಶಿವವಿಹಾರ ಎಂಬ ಪ್ರದೇಶದಲ್ಲಿರುವ ಮೊಹಲ್ಲಾ ಕ್ಲಿನಿಕ್ಗೆ ತೆರಳಿದ್ದ 12 ವರ್ಷದ ದಲಿತ ಬಾಲಕಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿದ ಘಟನೆಯು ವರದಿಯಾಗಿದೆ. ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಅನಾರೋಗ್ಯ ಇದ್ದ ಕಾರಣ ಬಾಲಕಿಯು ಕ್ಲಿನಿಕ್ಗೆ ತೆರಳಿದ್ದಳು ಎನ್ನಲಾಗಿದೆ. ಈ ಸಂದರ್ಭದ ಲಾಭ ಪಡೆಯಲು ಯತ್ನಿಸಿದ ವೈದ್ಯ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಕ್ಲಿನಿಕ್ನಿಂದ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಬಾಲಕಿಯು ತನ್ನ ಮನೆಯವರಿಗೆ ನಡೆದ ವಿಚಾರವನ್ನು ವಿವರಿಸಿದ್ದಾಳೆ. ಮಾರನೇ ದಿನ ಬಾಲಕಿಯ ತಂದೆ ಕ್ಲಿನಿಕ್ಗೆ ಬಾಲಕಿಯ ಜೊತೆ ತೆರಳಿದ್ದಾರೆ. ಕುಟುಂಬಸ್ಥರು ಹಾಗೂ ನೆರೆಹೊರೆಯವರೂ ಸಹ ಕ್ಲಿನಿಕ್ನತ್ತ ಧಾವಿಸಿದ್ದಾರೆ.
ಪೊಲೀಸರಿಗೂ ಪೋಷಕರು ಮಾಹಿತಿ ನೀಡಿದ್ದ ಹಿನ್ನೆಲೆ ಕ್ಲಿನಿಕ್ಗೆ ಪೊಲೀಸ್ ಕೂಡ ಆಗಮಿಸಿದ್ದರು. ಬಾಲಕಿ ನೀಡಿದ ಹೇಳಿಕೆಯನ್ನು ಆಧರಿಸಿ ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.