ಚಿಕ್ಕಮಕ್ಕಳಿಗೆ ಚುಚ್ಚುಮದ್ದು ನೀಡುವುದು ಎಂದರೆ ಸುಲಭದ ಮಾತಲ್ಲ, ಎಷ್ಟೋ ವೇಳೆ ಇಂಜೆಕ್ಷನ್ ಎಂದರೆ ದೊಡ್ಡವರೇ ಭಯಭೀತರಾಗುವುದು ಉಂಟು. ಇದೇ ಕಾರಣಕ್ಕೆ ಹಲವರು ಆಸ್ಪತ್ರೆಯ ಸಹವಾಸಕ್ಕೇ ಹೋಗುವುದಿಲ್ಲ. ಇನ್ನು ಚಿಕ್ಕಮಕ್ಕಳಿಗಂತೂ ಕೇಳುವುದೇ ಬೇಡ.
ಪುಟ್ಟ ಮಕ್ಕಳಿಗೆ ಇಂಜೆಕ್ಷನ್ ಚುಚ್ಚಲು ವೈದ್ಯರು ಹಲವಾರು ವಿಧಗಳನ್ನು ಅನುಸರಿಸುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಅಪ್ಪ-ಅಮ್ಮ ಮಕ್ಕಳ ಗಮನ ಬೇರೆಡೆ ಸೆಳೆದು ಚುಚ್ಚುಮದ್ದು ನೀಡಿಸುವುದೂ ಇದೆ. ಆದರೂ ಇಂಜೆಕ್ಷನ್ ಚುಚ್ಚಿದ ತಕ್ಷಣ ಮಕ್ಕಳು ಅರೆಕ್ಷಣ ಅಳುವುದು ಉಂಟು. ಆದರೆ ಈ ವಿಡಿಯೋ ನೋಡಿದರೆ ನಿಮಗೇ ಅಚ್ಚರಿಯಾಗಬಹುದು.
ವೈದ್ಯರೊಬ್ಬರು ಪುಟಾಣಿ ಮಗುವಿನ ಗಮನವನ್ನು ಬೇರೆಡೆ ಸೆಳೆದು ಅದಕ್ಕೆ ತಿಳಿಯದಂತೆ ಚುಚ್ಚುಮದ್ದು ನೀಡಿರುವ ವಿಡಿಯೋ ಇದಾಗಿದೆ. ಮಕ್ಕಳ ವೈದ್ಯರಾಗಿರುವ ಡಾ ಸಯ್ಯದ್ ಮುಜಾಹಿದ್ ಹುಸೇನ್ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ಇದಾಗಲೇ 22 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಮಗು ತನ್ನ ಮೊದಲ ಲಸಿಕೆಯನ್ನು ಪಡೆಯಲು ಸಿದ್ಧವಾಗಿ ಮಲಗಿರುವುದನ್ನು ನೋಡಬಹುದು. ಮಗುವನ್ನು ಬೇರೆಡೆಗೆ ಸೆಳೆಯಲು ವೈದ್ಯರು ಕೆಲವೊಂದು ತಮಾಷೆ ಮಾಡುತ್ತಾರೆ. ನಂತರ ಮಗುವಿಗೆ ಗೊತ್ತಿಲ್ಲದಂತೆಯೇ ಇಂಜೆಕ್ಷನ್ ಕೊಡುತ್ತಾರೆ. ಇಂಜೆಕ್ಷನ್ ಕೊಟ್ಟಾಗ ಮಗು ಒಂದೆರಡು ಸೆಕೆಂಡ್ ಅತ್ತರೂ ಮತ್ತೆ ವೈದ್ಯರು ಗೊಂಬೆ ತೋರಿಸಿ ಅದಕ್ಕೆ ನಗಿಸುತ್ತಾರೆ. ವೈದ್ಯರ ಈ ಕ್ರಮಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.