ಹಲವರಿಗೆ ಕಾಫಿಯನ್ನು ಅತಿಯಾಗಿ ಕುಡಿಯುವ ಅಭ್ಯಾಸವಿರುತ್ತದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಹತ್ತಾರು ಬಾರಿ ಕಾಫಿ ಸೇವನೆ ಮಾಡುವವರಿದ್ದಾರೆ.
ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಕಾಫಿ ಕೂಡ ಅತಿಯಾದ್ರೆ ಹತ್ತಾರು ಸಮಸ್ಯೆಗಳು ಉದ್ಭವಿಸುತ್ತವೆ. ಕಾಫಿಯಲ್ಲಿ ಕೆಫಿನ್ ಅಂಶವಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹ ಸೇರಿದಾಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಹೆಚ್ಹೆಚ್ಚು ಕಾಫಿ ಕುಡಿಯೋದ್ರಿಂದ ಉದ್ವೇಗ, ಆತಂಕ, ಹೃದಯ ಬಡಿತದಲ್ಲಿ ಏರುಪೇರು ಹಾಗೂ ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅನ್ನೋದು ಇತ್ತೀಚೆಗೆ ನಡೆಸಿದ ಸಂಶೋಧನೆಯಿಂದ ಬಹಿರಂಗವಾಗಿದೆ. ಅಷ್ಟೇ ಅಲ್ಲ ಕಾಫಿಯನ್ನು ಅತಿಯಾಗಿ ಕುಡಿದ್ರೆ ಹೃದಯಾಘಾತವೂ ಆಗಬಹುದು.
ದಿನಕ್ಕೆ 3 ಕಪ್ ಗಿಂತ ಹೆಚ್ಚು ಕಾಫಿ ಸೇವನೆ ಮಾಡುವುದರಿಂದ ಹೃದಯಾಘಾತವಾಗುವ ಅಪಾಯವಿದೆ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಇದಲ್ಲದೆ ಜೀರ್ಣಕ್ರಿಯೆಗೂ ಸಹ ಕಾಫಿ ಅಡ್ಡಿಯಾಗುತ್ತದೆ. ಅಜೀರ್ಣದಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಪರಿಣಾಮ ಭೇದಿ ಕಾಣಿಸಿಕೊಳ್ಳಬಹುದು.
ಕೆಫಿನ್ ನರಮಂಡಲವನ್ನು ಉತ್ತೇಜಿಸುವುದರಿಂದ ರಕ್ತದೊತ್ತಡ ಹೆಚ್ಚಾಗುವ ಸಂಭವವಿರುತ್ತದೆ. ಆರೋಗ್ಯವಂತರು ಕೂಡ ಹೈಪರ್ ಟೆನ್ಷನ್ ನಂತಹ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಇದಲ್ಲದೆ ಅತಿಯಾಗಿ ಕಾಫಿ ಕುಡಿದಲ್ಲಿ ಹೊಟ್ಟೆ ತೊಳಸುವಿಕೆ ಸುಸ್ತು ಕೂಡ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಿತವಾಗಿ ಕುಡಿದರೆ ಮಾತ್ರ ಕಾಫಿ ಹಿತವಾಗಿ ಇರಬಲ್ಲದು ಎನ್ನುತ್ತಾರೆ ವೈದ್ಯರು.