ದೇಶದಾದ್ಯಂತ ಮುಂಗಾರಿನ ಅಬ್ಬರ ಶುರುವಾಗಿದೆ. ಮಳೆಗಾಲದಲ್ಲಿ ರೋಗಗಳ ಅಪಾಯವೂ ಹೆಚ್ಚು. ಇದರ ಜೊತೆಜೊತೆಗೆ ಬಹಳಷ್ಟು ಬಗೆಯ ಸಮಸ್ಯೆಗಳು ಶುರುವಾಗುತ್ತವೆ. ಕೂದಲು ಉದುರುವಿಕೆ ಕೂಡ ಅವುಗಳಲ್ಲೊಂದು. ಈ ಋತುವಿನಲ್ಲಿ ಅನೇಕರಿಗೆ ಕೂದಲು ಉದುರಲಾರಂಭಿಸುತ್ತದೆ.
ಈ ಸಮಸ್ಯೆ ಕಾಣಿಸಿಕೊಳ್ಳುವುದು ಕಂಡುಬರುತ್ತದೆ. ವಾಸ್ತವವಾಗಿ ಮಳೆಗಾಲದಲ್ಲಿ ಕೂದಲಿನಲ್ಲಿ ತೇವಾಂಶವಿರುತ್ತದೆ. ನೆತ್ತಿಯನ್ನು ದೀರ್ಘಕಾಲ ಒದ್ದೆಯಾಗಿರಿಸುವುದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಋತುವಿನಲ್ಲಿ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ತಜ್ಞರು ಕೂಡ ಶಿಫಾರಸು ಮಾಡುತ್ತಾರೆ.
ವರ್ಷದ ಯಾವ ತಿಂಗಳಿನಲ್ಲಿ ಅತಿ ಹೆಚ್ಚು ಕೂದಲು ಉದುರುತ್ತದೆ ಎಂಬ ಬಗ್ಗೆ ಸಹ ಸಂಶೋಧನೆ ನಡೆದಿದೆ. ತಜ್ಞರು ಹೇಳುವ ಪ್ರಕಾರ ಸಪ್ಟೆಂಬರ್ ಮತ್ತು ಅದರ ಸುತ್ತಮುತ್ತಲಿನ ತಿಂಗಳುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತದೆ. ಈ ತಿಂಗಳುಗಳಲ್ಲಿ ಮಳೆ ಮುಗಿದು ಚಳಿಗಾಲ ಬರಲು ಪ್ರಾರಂಭಿಸುತ್ತದೆ. ಈ ಬದಲಾಗುತ್ತಿರುವ ಋತುವಿನಲ್ಲಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಸೆಪ್ಟೆಂಬರ್ ನಂತರ ಜನವರಿ ವೇಳೆಗೆ ಕೂದಲು ಉದುರುವುದು ಕ್ರಮೇಣ ಕಡಿಮೆಯಾಗುತ್ತದೆ.
ಹಾಗಾಗಿ ಸಪ್ಟೆಂಬರ್‌ನಿಂದ ಜನವರಿ ತಿಂಗಳಿನವರೆಗೂ ಕೂದಲನ್ನು ಚೆನ್ನಾಗಿ ಆರೈಕೆ ಮಾಡಬೇಕು. ಆಹಾರ, ಪಾನೀಯ ಮತ್ತು ಜೀವನಶೈಲಿಯ ಬಗ್ಗೆ ಕಾಳಜಿ ವಹಿಸಬೇಕು. ಆಹಾರ ಮತ್ತು ಜೀವನಶೈಲಿ ಉತ್ತಮವಾಗಿದ್ದರೆ ಕೂದಲು ಉದುರುವುದನ್ನು ತಡೆಯಬಹುದು. ವಿಶ್ವದ ಪ್ರಸಿದ್ಧ ಕೂದಲು ತಜ್ಞ ಮಾರ್ಕ್ ಬ್ಲ್ಯಾಕ್ ಪ್ರಕಾರ, ಕೂದಲು ಉದುರುವಿಕೆಯ ಸಮಸ್ಯೆ ಸೆಪ್ಟೆಂಬರ್‌ನಲ್ಲಿ ಅತ್ಯಂತ ಹೆಚ್ಚಾಗಿರುತ್ತದೆ. ಕಾರಣ ಈ ತಿಂಗಳಲ್ಲಿ ತಾಪಮಾನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ.
ಅಕ್ಟೋಬರ್‌ನಿಂದ ಕೂದಲು ಉದುರುವುದು ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಜನವರಿ ವೇಳೆಗೆ ಕೂದಲು ಉದುರುವುದು ನಿಲ್ಲುತ್ತದೆ. ಕೂದಲು ಉದುರಲು ಕಾರಣವನ್ನೂ ಮಾರ್ಕ್ ವಿವರಿಸಿದ್ದಾರೆ. ಕೂದಲು ಉದುರುವಿಕೆಗೆ ಒತ್ತಡವು ಒಂದು ದೊಡ್ಡ ಕಾರಣ ಎನ್ನುತ್ತಾರೆ ಅವರು. ಒತ್ತಡ ದೇಹದ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರುತ್ತದೆ. ಒತ್ತಡವು ದೇಹದ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಕೂದಲಿನ ನೈಸರ್ಗಿಕ ಬೆಳವಣಿಗೆಯ ಪ್ರಕ್ರಿಯೆಯನ್ನು ಹದಗೆಡಿಸುತ್ತದೆ ಮತ್ತು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ.