ಕಾಫಿ, ಟೀ ಇಂದಲೇ ಎಷ್ಟೋ ಜನರ ಬೆಳಗು ಪ್ರಾರಂಭವಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯದೆ ಹೋದರೆ ಯಾವ ಕೆಲಸಕ್ಕೂ ಉತ್ಸಾಹ ಇರುವುದಿಲ್ಲ. ಕಾಫಿ ಮಾಡಲು ಹೊರಟಾಗ ಹಾಲು ಒಡೆದುಹೋದರೆ ಆಗುವ ಬೇಸರ ಅಷ್ಟಿಷ್ಟಲ್ಲ. ಹಾಲು ಬಹಳ ಸೂಕ್ಷ್ಮವಾದ ಆಹಾರ. ಹಾಲಿನ ಪ್ಯಾಕೆಟ್ ಖರೀದಿಸುವುದರಿಂದ ಹಿಡಿದು ಅದು ಮುಗಿಯುವವರೆಗೂ ಬಹಳ ಜೋಪಾನವಾಗಿ ನೋಡಿಕೊಳ್ಳುವುದು ಮುಖ್ಯ ಹಾಗೂ ಅನಿವಾರ್ಯ.
ನಮ್ಮ ನಿರ್ಲಕ್ಷ್ಯದಿಂದಲೇ ಹಾಲು ಒಡೆಯುವ ಸಂಭವ ಹೆಚ್ಚು. ಹೀಗೆ ಆಗದಂತೆ ಎಚ್ಚರ ವಹಿಸುವುದಕ್ಕೆ ಇಲ್ಲಿದೆ ಕೆಲವು ಟಿಪ್ಸ್.
ಹಾಲನ್ನು ಖರೀದಿಸುವಾಗ ಪ್ಯಾಕೆಟ್ ಮೇಲಿನ ದಿನಾಂಕವನ್ನು ಮೊದಲು ಗಮನಿಸಿ. ಅವಧಿ ಮೀರಿದ ಪ್ಯಾಕೆಟ್ ಖರೀದಿ ಮಾಡಿದರೆ ಹಾಲನ್ನು ತಕ್ಷಣ ಕಾಯಿಸಿದರೂ ಒಡೆಯುವುದು ಖಚಿತ.
ಸಾಮಾನ್ಯವಾಗಿ ಹಾಲು ಕಾಯಿಸಲು ಎಲ್ಲರ ಮನೆಯಲ್ಲೂ ಪ್ರತ್ಯೇಕ ಪಾತ್ರೆ ಇದ್ದೇ ಇರುತ್ತದೆ. ಇದನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಆದಷ್ಟು ಬಿಸಿ ನೀರಿನಲ್ಲಿ ತೊಳೆದರೆ ಒಳ್ಳೆಯದು. ಸರಿಯಾಗಿ ಸ್ವಚ್ಛಗೊಳಿಸದ ಪಾತ್ರೆಯಲ್ಲಿ ಹಾಲು ಕಾಯಿಸಿವುದರಿಂದಲೂ ಓಡೆದುಹೋಗಬಹುದು.
ಬೇಸಿಗೆಯಲ್ಲಿ ಹಾಲು ಬಹಳ ಬೇಗ ಓಡೆದುಹೋಗುತ್ತದೆ. ಫ್ರಿಡ್ಜ್ ಇಲ್ಲದೆ ಇರುವವರು ದಿನಕ್ಕೆ ಮೂರು ಬಾರಿಯಾದರೂ ಹಾಲನ್ನು ಕಾಯಿಸಬೇಕು. ಅಷ್ಟೇ ಅಲ್ಲ, ಈ ಹಾಲಿನ ಪಾತ್ರೆಯನ್ನು ನೀರು ತುಂಬಿದ ತಟ್ಟೆಯಲ್ಲಿ ಸದಾ ಇಡಬೇಕು.
ಹಾಲು ಓಡೆದುಹೋಗುತ್ತದೆ ಎಂಬ ಅನುಮಾನ ಖಚಿತವಾಗಿದ್ದರೆ, ಕಾಯಿಸುವ ಮುನ್ನ ಚಿಟಿಕೆ ಅಡುಗೆಸೋಡಾ ಹಾಕಿ ಹಾಲು ಕಾಯಿಸಿ.