
ಉದ್ಯಮಿ ಗೌತಮ್ ಅದಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗಿದ್ದರೆ ಅದಾನಿ ಅವರ ಸಂಬಳ ಎಷ್ಟಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ 2024ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಅದಾನಿ ಪಡೆದಿರುವ ಸಂಬಳ, ಅವರ ಕೈಕೆಳಗೆ ಕೆಲಸ ಮಾಡುವ ಅನೇಕ ಕಾರ್ಯನಿರ್ವಾಹಕರ ಗಳಿಕೆಗಿಂತ ಕಡಿಮೆಯಾಗಿದೆ.
61 ವರ್ಷದ ಅದಾನಿ ಅವರು ಒಟ್ಟು 9.26 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಇದು ಬಹುತೇಕ ಉದ್ಯಮದ ಗೆಳೆಯರಿಗಿಂತ ಕಡಿಮೆಯಾಗಿದೆ. ಅದಾನಿ ಅವರ ವೇತನ ಅವರ ಹತ್ತು ಕಂಪನಿಗಳ ಪೈಕಿ ಕೇವಲ ಎರಡರಿಂದ ಬಂದಿದೆ. ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ನಿಂದ ಅವರು 2.46 ಕೋಟಿ ವೇತನವನ್ನು ಪಡೆದಿದ್ದಾರೆ. ಇದರಲ್ಲಿ 2.19 ಕೋಟಿ ಸಂಬಳ ಮತ್ತು 27 ಲಕ್ಷ ಇತರ ಭತ್ಯೆಗಳಿವೆ.
ಈ ಮೊತ್ತ ಹಿಂದಿನ ಹಣಕಾಸು ವರ್ಷಕ್ಕಿಂತ ಕೇವಲ 3 ಪ್ರತಿಶತ ಹೆಚ್ಚಾಗಿದೆ. ಹೆಚ್ಚುವರಿಯಾಗಿ ಅವರು ಅದಾನಿ ಪೋರ್ಟ್ಸ್ ಮತ್ತು SEZ ಲಿಮಿಟೆಡ್ (APSEZ) ನಿಂದ 6.8 ಕೋಟಿ ಗಳಿಸಿದ್ದಾರೆ. ಅದಾನಿ ಅವರ ಸಂಬಳವು ಭಾರತದ ಬಹುತೇಕ ಎಲ್ಲಾ ದೊಡ್ಡ ಕುಟುಂಬ ಮಾಲೀಕತ್ವದ ಸಂಘಟಿತ ಸಂಸ್ಥೆಗಳ ಮುಖ್ಯಸ್ಥರಿಗಿಂತ ಕಡಿಮೆಯಾಗಿದೆ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಕೋವಿಡ್ ಬಳಿಕ ತಮ್ಮ ಸಂಪೂರ್ಣ ವೇತನವನ್ನು ತ್ಯಜಿಸಿದ್ದಾರೆ. ಅದಕ್ಕೂ ಮೊದಲು ಸಂಭಾವನೆಯನ್ನು 15 ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಿದ್ದರು. ಟೆಲಿಕಾಂ ಉದ್ಯಮಿ ಸುನಿಲ್ ಭಾರ್ತಿ ಮಿತ್ತಲ್ ಅವರ ಗಳಿಕೆ 2022-23 ರಲ್ಲಿ 16.7 ಕೋಟಿ ರೂಪಾಯಿ ಇತ್ತು. ರಾಜೀವ್ ಬಜಾಜ್ ಅವರ ಗಳಿಕೆ 53.7 ಕೋಟಿ ರೂಪಾಯಿ, ಪವನ್ ಮುಂಜಾಲ್ ಅವರ ಗಳಿಕೆ 80 ಕೋಟಿ ರೂಪಾಯಿ ಇತ್ತು. ಎಲ್ & ಟಿ ಅಧ್ಯಕ್ಷ ಎಸ್. ಎನ್.ಸುಬ್ರಹ್ಮಣ್ಯನ್ ಮತ್ತು ಇನ್ಫೋಸಿಸ್ ಸಿಇಓ ಸಲೀಲ್ ಎಸ್. ಪಾರೇಖ್ ಅವರ ಗಳಿಕೆ ಕೂಡ ಅದಾನಿ ಅವರಗಿಂತ ಹೆಚ್ಚಿದೆ.
ಅದಾನಿ ಅವರ ಒಟ್ಟಾರೆ ಆಸ್ತಿ 106 ಬಿಲಿಯನ್ ಅಮೆರಿಕನ್ ಡಾಲರ್ ಇದ್ದರೂ ಸಾಧಾರಣ ಸಂಬಳ ಪಡೆದಿರೋದು ಗಮನಾರ್ಹ. ಅದಾನಿ ಸದ್ಯ ಅಂಬಾನಿ ಅವರೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. 2022ರಲ್ಲಿ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಈ ವರ್ಷ ಎರಡು ಬಾರಿ ಅಗ್ರಸ್ಥಾನವನ್ನು ಮರಳಿ ಪಡೆದರು, ಆದರೆ ಅಂತಿಮವಾಗಿ 111 ಬಿಲಿಯನ್ ಬಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿರುವ ಅಂಬಾನಿ ಏಷ್ಯಾದ ಸಿರಿವಂತ ಎನಿಸಿಕೊಂಡಿದ್ದಾರೆ. ಅದಾನಿ ಈ ಪಟ್ಟಿಯಲ್ಲಿ14 ನೇ ಸ್ಥಾನದಲ್ಲಿದ್ದಾರೆ.
ಅದಾನಿ ಅವರ ಕಿರಿಯ ಸಹೋದರ ರಾಜೇಶ್ 4.71 ಕೋಟಿ ಕಮಿಷನ್ ಸೇರಿದಂತೆ 8.37 ಕೋಟಿ ಗಳಿಸಿದ್ದಾರೆ. ಅವರ ಸೋದರಳಿಯ ಪ್ರಣವ್ ಅದಾನಿ 6.46 ಕೋಟಿ ಪಡೆದಿದ್ದಾರೆ. ಆದರೆ ಗೌತಮ್ ಅದಾನಿ ಅವರು AEL ನಿಂದ ಯಾವುದೇ ಕಮಿಷನ್ ಪಡೆಯಲಿಲ್ಲ. APSEZ ನಿಂದ 5 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದಾರೆ. ಅಪಾರ ಸಂಪತ್ತಿದ್ದರೂ ಸಂಬಳ ಕಡಿಮೆ ಪಡೆದಿರುವುದು ಅವರ ನಾಯಕತ್ವ ಮತ್ತು ಹಣಕಾಸಿನ ಕಾರ್ಯತಂತ್ರದ ವೈಶಿಷ್ಟ್ಯಕ್ಕೆ ಸಾಕ್ಷಿ.