ಗರ್ಭಿಣಿಯರಿಗೆ ಮಗು ಬೆಳ್ಳಗೆ ಇರಲೆಂದು ಕುಡಿಯುವ ಹಾಲಿನಲ್ಲಿ ಚಿಟಿಕೆ ಕೇಸರಿ ಬೆರೆಸಿ ಕುಡಿಯಲು ಕೊಡುವುದನ್ನು ನೀವು ಕಂಡಿರಬಹುದು.
ಈ ಕೇಸರಿ ಅಷ್ಟೊಂದು ಪ್ರಭಾವಶಾಲಿಯೇ, ತಿಳಿಯೋಣ ಬನ್ನಿ…
ಅನಾದಿ ಕಾಲದಿಂದಲೂ ಕೇಸರಿಯನ್ನು ಸೌಂದರ್ಯ ವರ್ಧಕವಾಗಿ ಬಳಸುತ್ತಾರೆ. ಹಾಲಿನೊಂದಿಗೆ ಬೆರೆಸಿ ಕುಡಿದರೆ ಅದು ಮಗುವಿಗೂ ತಲುಪಿ ಮಗುವಿನ ತ್ವಚೆ ಬೆಳ್ಳಗಾಗುತ್ತದೆ ಎಂಬುದು ನಂಬಿಕೆ ಮಾತ್ರ. ಇದನ್ನು ಹೆಚ್ಚು ಸೇವಿಸದೆ ವಾರಕ್ಕೆ ಒಂದರಿಂದ ಎರಡು ಬಾರಿ ಮಾತ್ರ ಚಿಟಿಕೆ ಕೇಸರಿ ಉದುರಿಸಿ ಹಾಲು ಕುಡಿದರೆ ಸಾಕು ಎನ್ನುತ್ತಾರೆ ವೈದ್ಯರು.
ಚಳಿಗಾಲದಲ್ಲಿ ಬೀಸುವ ಕುಳಿರ್ಗಾಳಿ ತ್ವಚೆಯನ್ನು ಒಣಗಿಸುತ್ತದೆ. ಇದನ್ನು ತಪ್ಪಿಸಲು ಜೇನುತುಪ್ಪ ಮತ್ತು ಕೇಸರಿಯನ್ನು ಬಳಸಬಹುದು. ಇವೆರಡರ ಮಿಶ್ರಣವನ್ನು ಮುಖ ಹಾಗೂ ಕೈಗಳಿಗೆ ಹಚ್ಚಿಕೊಂಡರೆ ತ್ವಚೆಯ ಅಂದ ಚಂದ ಹೆಚ್ಚುವುದು ಮಾತ್ರವಲ್ಲ ಮುಖಕ್ಕೆ ಕಾಂತಿಯೂ ದೊರೆಯುತ್ತದೆ.
ಬಿಸಿಲಿನಲ್ಲಿ ಕೆಲಸ ಮಾಡಿದ ಪರಿಣಾಮ ಅಥವಾ ಇತರ ಕಾರಣಗಳಿಂದ ತ್ವಚೆ ಕಪ್ಪಾಗಿದ್ದರೆ ಕೇಸರಿಯನ್ನು ಹಾಲಿನಲ್ಲಿ ನೆನೆಸಿಡಿ. ಬಳಿಕ ಈ ಹಾಲಿಗೆ ಶ್ರೀಗಂಧದ ಪುಡಿ ಹಾಕಿ ಪೇಸ್ಟ್ ತಯಾರಿಸಿ. ಇದನ್ನು ಕುತ್ತಿಗೆ ಹಾಗೂ ಮುಖಕ್ಕೆ ಚೆನ್ನಾಗಿ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚಿ ಕಲೆ ಮೊಡವೆಗಳು ದೂರವಾಗುತ್ತವೆ.