ಸಿಹಿ ಪ್ರಿಯರು ಸೋನ್ ಪಾಪಡಿಗೆ ಇಲ್ಲ ಎಂದು ಹೇಳುವ ಮಾತೇ ಇಲ್ಲ. ಯಾವುದೇ ಬೇಕರಿಗೆ ಹೋದರೂ ನಿಮಗೆ ಈ ಸೋನ್ ಪಾಪಡಿ ಸಿಕ್ಕೇ ಸಿಗುತ್ತದೆ. ದೀಪಾವಳಿ ಹಬ್ಬದಂತಹ ಸಂದರ್ಭದಲ್ಲಂತೂ ಸಿಹಿ ವಿನಿಮಯ ಮಾಡಿಕೊಳ್ಳುವ ರೂಪದಲ್ಲಿ ಸೋನ್ ಪಾಪಡಿ ಡಬ್ಬಿ ನೀಡುವುದು ಸರ್ವೆ ಸಾಮಾನ್ಯ.
ಆದರೆ ಈ ಸೋನ್ ಪಾಪಡಿ ಹೇಗೆ ಮಾಡ್ತಾರೆ ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ..?ಬಾಯಲ್ಲಿ ನೀರೂರಿಸುವ ಈ ತಿಂಡಿಯನ್ನ ಹೇಗೆ ಮಾಡ್ತಾರೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ʼಇಂಡಿಯಾ ಈಟ್ ಮೇನಿಯಾʼ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಗುಜರಾತ್ನ ಮೆಗಾ ಕಿಚನ್ ಫ್ಯಾಕ್ಟರಿಯಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಇದು ಸದ್ಯ ಯುಟ್ಯೂಬ್ನಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದ್ದು 62 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ.
ಈ ವಿಡಿಯೋದಲ್ಲಿ 4 ಕೆಜಿ ಸೋನ್ ಪಾಪಡಿಯನ್ನು ತಯಾರಿಸಲಾಗಿದೆ. ಮೊದಲು ಸಕ್ಕರೆ ಪಾಕವನ್ನು ತಯಾರಿಸಿ ಬಳಿಕ ಅದನ್ನು ತಣ್ಣಗಾಗಲು ಬಿಡುತ್ತಾರೆ. ಇದಾದ ಬಳಿಕ ನಾಲ್ವರು ಕೆಲಸಗಾರರು ಸೇರಿ ಈ ಸಕ್ಕರೆ ಪಾಕಕ್ಕೆ ಸೋನ್ ಪಾಪಡಿ ರೂಪವನ್ನು ನೀಡುತ್ತಾ ಹೋಗುತ್ತಾರೆ.
ಮಧ್ಯದಲ್ಲಿ ಕಡ್ಲೆ ಹಿಟ್ಟಿಗೆ ಡ್ರೈ ಫ್ರೂಟ್ಸ್ ಹಾಗೂ ತುಪ್ಪವನ್ನು ಹಾಕಿದ ಮಿಶ್ರಣವನ್ನು ಸೇರಿಸಲಾಗುತ್ತದೆ. ಕ್ರಮೇಣ ಸಕ್ಕರೆ ಪಾಕವು ದಾರದ ರೀತಿಯಲ್ಲಿ ಎಳೆ ಎಳೆಯಾಗಿ ಕಾಣಿಸಿಕೊಳ್ಳುತ್ತದೆ. ಬಳಿಕ ಇದನ್ನು ಮೌಲ್ಡ್ನಲ್ಲಿ ಹಾಕಿ ಸರಿಯಾದ ಆಕಾರ ನೀಡಲಾಗುತ್ತದೆ. ಸೋನ್ ಪಾಪಡಿಯನ್ನು ಬಾಕ್ಸ್ಗೆ ಹಾಕಿ ಪ್ಯಾಕ್ ಮಾಡುವ ದೃಶ್ಯ ಕೂಡ ವಿಡಿಯೋದಲ್ಲಿದೆ.