ಬಿಸಿಲಿಗೆ ಕೆಲಸ ಮಾಡಿದ ಪರಿಣಾಮ ಇಲ್ಲವೇ ವಿಪರೀತ ದೇಹಾಯಾಸವಾದ ಕಾರಣಕ್ಕೆ ಬಾಯಿಯ ಸುತ್ತ, ಕಣ್ಣಿನ ಸುತ್ತ ಇಲ್ಲವೇ ಮುಖದ ಅಲ್ಲಲ್ಲಿ ಕಪ್ಪು ಬಣ್ಣದ ಪ್ಯಾಚ್ ಗಳು ಕಾಣಿಸಿಕೊಂಡು ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತವೆ.
ಇಂಥ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯಬೇಕಿದ್ದರೆ ನಿತ್ಯ ಕಡಲೆಹಿಟ್ಟನ್ನು ಬಳಸಬೇಕು. ಕಡಲೆ ಹಿಟ್ಟಿಗೆ ಚಿಟಿಕೆ ಅರಶಿನ ಮತ್ತು ದಪ್ಪನೆಯ ಹಾಲು ಬೆರೆಸಿ ಪೇಸ್ಟ್ ತಯಾರಿಸಿ. ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳ ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ನಾಲ್ಕು ಬಾರಿ ಹೀಗೆ ಮಾಡಿದರೆ ಹದಿನೈದು ದಿನಗಳಲ್ಲಿ ನಿಮ್ಮ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ.
ಓಟ್ಸ್ ಕೂಡಾ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ. ಇದಕ್ಕೆ ಟೊಮೆಟೊ ರಸ ಮತ್ತು ಆಲಿವ್ ಆಯಿಲ್ ಬೆರೆಸಿ ರುಬ್ಬಿ ದಪ್ಪನೆಯ ಮಿಶ್ರಣ ತಯಾರಿಸಿ. ಇದನ್ನು ಮುಖದಲ್ಲಿ ಕಲೆಗಳಿರುವ ಭಾಗಕ್ಕೆ ನಯವಾಗಿ ಹಚ್ಚಿ ಹಾಗೂ ಮಸಾಜ್ ಮಾಡಿ. ಒಣಗುತ್ತಲೇ ತಣ್ಣಗಿನ ನೀರಿನಿಂದ ತೊಳೆಯಿರಿ.
ಪಪ್ಪಾಯ ಹಣ್ಣಿನ ಒಳಭಾಗಕ್ಕೆ ಲಿಂಬೆರಸ ಸೇರಿಸಿ, ಲೇಹವನ್ನು ಮುಖದ ಮೇಲೆ ಮಸಾಜ್ ಮಾಡಿ. ಆಲೂಗಡ್ಡೆ ತುರಿಯನ್ನೂ ಇದೇ ರೀತಿ ಮಾಡಿ ಹಚ್ಚಿಕೊಳ್ಳಬಹುದು. ವಾರಕ್ಕೊಮ್ಮೆ ಅರಶಿನ ಪುಡಿಯ ಪೇಸ್ಟ್ ತಯಾರಿಸಿ ಹಚ್ಚಿಕೊಳ್ಳುವುದು ಒಳ್ಳೆಯದು.