ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಕೆಲವೊಮ್ಮೆ ಅವುಗಳಿಗೆ ಯಾವ ಆಹಾರ ಕೊಡಬೇಕು ಎನ್ನುವುದೇ ಗೊಂದಲವಾಗುತ್ತದೆ. ಇನ್ನು ಕೆಲವರು ಇದು ಕೊಟ್ಟರೆ ಶೀತ ಕಡಿಮೆಯಾಗುತ್ತದೆ. ಅದು ಕೊಡು ಮಗು ದಪ್ಪಗಾಗುತ್ತದೆ ಎನ್ನುತ್ತಾರೆ.
ಯಾರದ್ದೋ ಮಾತುಕೇಳಿ ಏನೇನೋ ಆಹಾರ ಕೊಡುವ ಮೊದಲು ನಮ್ಮ ಮಕ್ಕಳಿಗೆ ಯಾವ ಆಹಾರ ಸೂಕ್ತ ಎಂಬುದನ್ನು ಪಾಲಕರು ಮೊದಲು ತಿಳಿದುಕೊಳ್ಳಬೇಕು. ಹಾಗೇ ಮಗುವಿಗೆ ಕೆಲವೊಂದು ಆಹಾರವನ್ನು ಕೊಡಲೇಬಾರದು. ಆ ಆಹಾರಗಳು ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
*3 ವರ್ಷದೊಳಗಿನ ಮಕ್ಕಳಿಗೆ ಪಾಪ್ ಕಾರ್ನ್, ಕ್ಯಾಂಡಿ, ಕ್ಯಾರೆಟ್, ಚುಯಿಂಗ್ ಗಮ್, ಕಡಲೇಬೀಜ, ಚೆರ್ರಿ, ದಾಳಿಂಬೆ ಹಣ್ಣುಗಳನ್ನು ಕೊಡಲೇಬೇಡಿ. ಇದನ್ನು ತಿನ್ನುವಾಗ ಅವರ ಗಂಟಲಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಆಹಾರಗಳಿಂದ ಮಕ್ಕಳನ್ನು ದೂರವಿಡಿ.
*ಒಂದು ವರ್ಷದ ಮಗುವಿಗೆ ಯಾವುದೇ ಕಾರಣಕ್ಕೂ ಸಕ್ಕರೆ, ಚಾಕೋಲೇಟ್, ಕೋಲಾ, ಕ್ಯಾಂಡಿಗಳನ್ನು ಕೊಡಬೇಡಿ. ಸಕ್ಕರೆಯಿಂದ ಮಕ್ಕಳಿಗೆ ಹಲ್ಲು ಹಾಳಾಗುವುದು, ಬೊಜ್ಜಿನ ಸಮಸ್ಯೆ ಕಾಡುತ್ತದೆ. ಇದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
* ಇನ್ನು ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಉಪ್ಪನ್ನು ಕೊಡಬೇಡಿ. ತಾಯಿಯ ಹಾಲಿನಲ್ಲಿಯೇ ಅವುಗಳಿಗೆ ಬೇಕಾಗುವಷ್ಟು ಪ್ರಮಾಣದ ಸೋಡಿಯಂ ಇರುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಅತೀಯಾದ ಉಪ್ಪನ್ನು ಮಕ್ಕಳಿಗೆ ಕೊಡುವುದರಿಂದ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಇದೆ. ಹಾಗೇ ಅತಿಯಾದ ರಕ್ತದೊತ್ತಡ ಸಮಸ್ಯೆ ಅವರನ್ನು ಕಾಡುತ್ತದೆ. ಹಾಗೇ ಅವರ ದೇಹವನ್ನು ನಿರ್ಜಲಿಕರಣಗೊಳಿಸುತ್ತದೆ.
*ಕೆಲವರು ಚಿಕ್ಕಮಗುವಿಗೆ ಜೇನುತುಪ್ಪವನ್ನು ಕೊಡುತ್ತಾರೆ. ಮಕ್ಕಳ ಜೀರ್ಣಕ್ರೀಯೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಹಾಗಾಗಿ ಚಿಕ್ಕಮಕ್ಕಳಿಗೆ ಜೇನುತುಪ್ಪವನ್ನು ಕೊಡಲೇಬೇಡಿ.
*ಇನ್ನು ಕೆಲವರು ಬೇಗನೇ ಹಸುವಿನ ಹಾಲನ್ನು ಮಕ್ಕಳಿಗೆ ಕೊಡುತ್ತಾರೆ. ಒಂದು ವರ್ಷದೊಳಗಿನ ಮಕ್ಕಳಿಗೆ ಹಸುವಿನ ಹಾಲಿನ ಅವಶ್ಯಕತೆ ಇರುವುದಿಲ್ಲ. ಹಾಲಿನಲ್ಲಿ ಪ್ರೋಟಿನ್, ಸೋಡಿಯಂ ಹಾಗೂ ಪೋಟ್ಯಾಷಿಯಂ ಅಧಿಕವಾಗಿರುತ್ತದೆ. ಇದು ಮಗುವಿನ ಜೀರ್ಣಕ್ರೀಯೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.