alex Certify ಕೊಲೆ ಕೇಸ್ ನಲ್ಲಿ ಜಾಮೀನು ನೀಡಲು ಅಂಗವೈಕಲ್ಯ ಸಕಾರಣವಲ್ಲ: ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆ ಕೇಸ್ ನಲ್ಲಿ ಜಾಮೀನು ನೀಡಲು ಅಂಗವೈಕಲ್ಯ ಸಕಾರಣವಲ್ಲ: ಹೈಕೋರ್ಟ್

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜಾಮೀನು ನೀಡಲು ಅಂಗವೈಕಲ್ಯ ಸಕಾರಣವಲ್ಲ ಎಂದು ಹೈಕೋರ್ಟ್ ಹೇಳಿದ್ದು, ಜಾಮೀನು ನೀಡಲು ನಿರಾಕರಿಸಿದೆ. ವೃದ್ಧ ದಂಪತಿ ಕೊಲೆಗೈದು ಚಿನ್ನಾಭರಣ ದೋಚಿದ್ದ ಅಂಗವಿಕಲನಾದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಅಂಗವೈಕಲ್ಯವನ್ನೇ ಮುಂದಿಟ್ಟುಕೊಂಡು ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಚಿನ್ನಾಭರಣ ದೋಚಿದ ಆರೋಪಿ ತಾನು ಅಮಾಯಕನೆಂದು ಬಿಂಬಿಸಿ ಜಾಮೀನು ಪಡೆಯಲು ಪ್ರಯತ್ನಿಸಿದ್ದು, ಇದಕ್ಕೆ ಹೈಕೋರ್ಟ್ ನಿರಾಕರಿಸಿದೆ.

ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಮೆಲ್ಲಾಪುರ ಕಾಲೋನಿ ನಿವಾಸಿ ನಾರಾಯಣಸ್ವಾಮಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ತಾನು ಅಂಗವಿಕಲನಾದ ಕಾರಣ ಕೊಲೆ ಮಾಡಲು ಸಾಧ್ಯವಿಲ್ಲ. ಜಾಮೀನು ಕೊಡಬೇಕೆಂದು ಮನವಿ ಮಾಡಿದ್ದ. ಆತನ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಕೊಲೆಯಂತಹ ಗಂಭೀರ ಸ್ವರೂಪದ ಅಪರಾಧ ಕೃತ್ಯ ಎಸಗಿರುವ ಸನ್ನಿವೇಶದಲ್ಲಿ ಅಂಗವಿಕಲತೆ ಎಂದು ಜಾಮೀನು ಅರ್ಜಿ ಪರಿಗಣಿಸಲು ಸಕಾರಣವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ನ್ಯಾಯಪೀಠ ಜಾಮೀನು ನೀಡಲು ನಿರಾಕರಿಸಿದೆ. 2021ರ ಆಗಸ್ಟ್ 20ರಂದು ಬಿಎಂಟಿಸಿ ನಿವೃತ್ತ ಮೆಕಾನಿಕ್ ಶಾಂತರಾಜು ಮತ್ತು ಅವರ ಪತ್ನಿ ಪ್ರೇಮಲತಾ ಅವರನ್ನು ಯಲಚೇನಹಳ್ಳಿಯ ಮನೆಯಲ್ಲಿ ಹತ್ಯೆ ಮಾಡಿ ಚಿನ್ನಾಭರಣ ದೋಚಲಾಗಿತ್ತು. ಕುಮಾರಸ್ವಾಮಿ ಠಾಣೆ ಪೊಲೀಸರು ಅರ್ಜಿದಾರ ನಾರಾಯಣ ಸ್ವಾಮಿ ಮತ್ತು ಸಹಚರ ಆರೋಪಿಗಳನ್ನು ಬಂಧಿಸಿದ್ದರು.

ಜಾಮೀನು ಕೋರಿ ನ್ಯಾಯಾಂಗ ಬಂಧನದಲ್ಲಿರುವ ನಾರಾಯಣಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದು, ಅಮಾಯಕನಾಗಿರುವ ನಾರಾಯಣಸ್ವಾಮಿ ಅಂಗವಿಕಲನಾಗಿದ್ದು, ಕೊಲೆಯಂತಹ ಅಪರಾಧದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಆತನ ಪತ್ನಿ ಕೂಡ ಅಂಗವಿಕಲೆಯಾಗಿದ್ದು, ಹೆಣ್ಣು ಮಗು ಇದೆ. ಕುಟುಂಬದ ಪೋಷಣೆಯ ಜವಾಬ್ದಾರಿ ಅರ್ಜಿದಾರರ ಮೇಲಿದ್ದು, ಅವರಿಗೆ ಜಾಮೀನು ನೀಡಬೇಕೆಂದು ವಕೀಲರು ಕೋರಿದ್ದರು.

ಅವರ ವಾದ ತಿರಸ್ಕರಿಸಿದ ಹೈಕೋರ್ಟ್, ದೋಷಾರೋಪ ಪಟ್ಟಿ ಮತ್ತು ಆರೋಪಿಗಳ ಸ್ವಯಂಕೃತ ಹೇಳಿಕೆಗಳ ಪ್ರಕಾರ ಅರ್ಜಿದಾರನೇ ವೃದ್ಧ ದಂಪತಿಯ ಕೊಲೆಗೆ ಸಂಚು ರೂಪಿಸಿದ್ದ. ಪ್ರೇಮಲತಾ ಅವರಿಗೆ ತಲೆದಿಂಬಿನಿಂದ ಉಸಿರು ಕಟ್ಟಿಸಿದ್ದ. ಕರುಣೆ ಇಲ್ಲದೆ ಪ್ರೇಮಲತಾ ತಲೆಯನ್ನು ಗೋಡೆಗೆ ಜಜ್ಜಿ ಆತನ ಸಹಚರರು ಕೊಲೆ ಮಾಡಿದ್ದಾರೆ. ಅರ್ಜಿದಾರನಿಂದ ಪ್ರೇಮಲತಾ ಮೈಮೇಲಿದ್ದ 72 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆತನ ವಿರುದ್ಧ ಬಲವಾದ ಸಾಕ್ಷಿಗಳಿವೆ ಎಂದು ಹೇಳಿದ ನ್ಯಾಯಪೀಠ ಜಾಮೀನು ನೀಡಲು ನಿರಾಕರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...