ದೇಶಾದ್ಯಂತ ಸಾರ್ವಜನಿಕರು ತಮ್ಮ ಆರೋಗ್ಯ ಸಂಬಂಧಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ನೆರವಾಗುವ ಯೋಜನೆಯೊಂದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಚಾಲನೆ ಕೊಟ್ಟಿದ್ದಾರೆ.
ಕಳೆದ ವರ್ಷವಷ್ಟೇ ಕೆಂಪು ಕೋಟಿಯ ಆವರಣದಲ್ಲಿ ಸ್ವಾತಂತ್ರ‍್ಯೋತ್ಸವದಂದು ಆಯುಷ್ಮಾನ್ ಭಾರತ್ ಡಿಜಿಟಲ್ ಯೋಜನೆಯ ಪೈಲಟ್ ಪ್ರಾಜೆಕ್ಟ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು.
ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಅಭಿಯಾನದಡಿ ಪ್ರತಿ ಭಾರತೀಯನಿಗೂ 14 ಅಂಕಿಯ ಆರೋಗ್ಯ-ಗುರುತು ಸಂಖ್ಯೆ ಸಿಗಲಿದೆ.
ಸದ್ಯದ ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂರನೇ ವರ್ಷಾಚರಣೆಯ ಸಂದರ್ಭದಲ್ಲೇ ಆಯುಷ್ಮಾನ್ ಭಾರತ್ ಡಿಜಿಟಲ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಈ ಯೋಜನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ನಗು ತರಿಸುತ್ತಿದೆ RCB ಅಭಿಮಾನಿಯ ಈ ಫೋಟೋ..!
ಆರೋಗ್ಯ ಸಂಬಂಧಿ ವೈಯಕ್ತಿಕ ಮಾಹಿತಿಗಳ ಸುರಕ್ಷತೆ ಖಾತ್ರಿ ಪಡಿಸುವುದರ ಜೊತೆಗೆ ಆಯುಷ್ಮಾನ್ ಭಾರತ ಡಿಜಿಟಲ್ ಅಭಿಯಾನವು ಆನ್ಲೈನ್ ಪ್ಲಾಟ್‌ಫಾರಂಗಳ ಮೂಲಕ ನಾನಾ ರೀತಿಯ ದತ್ತಾಂಶಗಳು, ಮಾಹಿತಿ, ಮೂಲ ಸೌಕರ್ಯಗಳನ್ನು ಡಿಜಿಟಲ್ ವ್ಯವಸ್ಥೆಗಳಡಿ ಸಂಗ್ರಹಿಸುವ ಮೂಲಕ ಅಗತ್ಯವಿದ್ದಾಗ ಸುಲಭವಾಗಿ ದಕ್ಕುವಂತೆ ಮಾಡುತ್ತದೆ.
ಫಲಾನುಭವಿಯ ಆಧಾರ್ ಅಥವಾ ಮೊಬೈಲ್ ಸಂಖ್ಯೆ ಮೂಲಕ ಆರೋಗ್ಯ ಐಡಿ ಸೃಷ್ಟಿಸಲಾಗುವುದು. ಇದರಿಂದ ಫಲಾನುಭವಿಯ ಆರೋಗ್ಯಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸುಲಭವಾಗಿ ಅಕ್ಸೆಸ್ ಮಾಡುವ ಅವಕಾಶ ವೈದ್ಯಕೀಯ ಸಿಬ್ಬಂದಿಗೆ ಸಿಗಲಿದೆ. ಈ ವ್ಯವಸ್ಥೆಯಲ್ಲಿ ಫಲಾನುಭವಿಯ ಭೌಗೋಳಿಕ, ಜನಾಂಗೀಯ, ಕೌಟುಂಬಿಕ ಹಾಗೂ ಸಂಪರ್ಕಗಳ ವಿವರಗಳು ಇರುತ್ತವೆ. ಈ ಮಾಹಿತಿಗಳನ್ನು ಆರೋಗ್ಯ ಐಡಿಗೆ ಲಿಂಕ್ ಮಾಡಲಾಗುತ್ತದೆ.
ವೈಯಕ್ತಿಕ ಆರೋಗ್ಯ ದಾಖಲೆ ವ್ಯವಸ್ಥೆ ಮೂಲಕ ವ್ಯಕ್ತಿಯೊಬ್ಬರು ತಮಗೆ ಸಂಬಂಧಿಸಿದ ಆರೋಗ್ಯ ಸೇವೆಯ ಮಾಹಿತಿಗಳ ನಿರ್ವಹಣೆ ಮಾಡಬಹುದಾಗಿದೆ.
ರೋಗಿಯ ವೈದ್ಯಕೀಯ ಹಾಗೂ ಚಿಕಿತ್ಸೆಗಳ ದಾಖಲೆಯನ್ನು ನಿರ್ವಹಿಸಲು ವಿದ್ಯುನ್ಮಾನ ವೈದ್ಯಕೀಯ ದಾಖಲೆಯನ್ನು ಅಭಿಯಾನ ಸೃಷ್ಟಿಸಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.