ಕ್ಯಾರೆಟ್, ಕುಂಬಳಕಾಯಿ, ಸೋರೆಕಾಯಿ ಹಲ್ವಾ ತಿಂದಿರುತ್ತೀರಿ. ಇಲ್ಲಿ ಸುಲಭವಾಗಿ ಮಾಡುವ ಸೇಬುಹಣ್ಣಿನ ಹಲ್ವಾ ಇದೆ. ತಿನ್ನಲು ಕೂಡ ರುಚಿಕರವಾಗಿರುತ್ತದೆ, ಮಾಡುವುದು ಕೂಡ ಸುಲಭ. ಒಮ್ಮೆ ಮಾಡಿ ನೋಡಿ.
3-ದೊಡ್ಡ-ಸೇಬುಹಣ್ಣು, ½ ಟೀ ಸ್ಪೂನ್-ತುಪ್ಪ, 2 ಟೇಬಲ್ ಸ್ಪೂನ್-ಸಕ್ಕರೆ, ಹಳದಿ ಫುಡ್ ಕಲರ್-ಚಿಟಿಕೆ, 1 ಟೀ ಸ್ಪೂನ್-ಮೆಲನ್ ಬೀಜ, ¼ ಟೀ ಸ್ಪೂನ್-ಏಲಕ್ಕಿ ಪುಡಿ.
ಸೇಬುಹಣ್ಣಿನ ಸಿಪ್ಪೆ ತೆಗೆದು ಒಳಗಿನ ಬೀಜ ತೆಗೆದು ತುರಿದುಕೊಳ್ಳಿ. ತುರಿದುಕೊಂಡಿದ್ದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ನೀರು ಹಾಕಿ.
ಹಾಗೆಯೇ ಇಟ್ಟರೆ ಸೇಬು ಹಣ್ಣು ಕಪ್ಪಾಗುತ್ತದೆ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಸೇಬು ಹಣ್ಣಿನ ತುರಿಯಲ್ಲಿರುವ ನೀರನ್ನೆಲ್ಲಾ ಹಿಂಡಿ ತುರಿಯನ್ನು ಬಾಣಲೆಗೆ ಹಾಕಿ ಫ್ರೈ ಮಾಡಿಕೊಳ್ಳಿ.
ಇದು ಸ್ವಲ್ಪ ಬೆಂದ ಮೇಲೆ ಅದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಬೇಯಲಿ. ಇದಕ್ಕೆ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ ಹಲ್ವಾದ ಮಿಶ್ರಣ ತಳಬಿಡುವವರೆಗೆ ಕೈಯಾಡಿಸುತ್ತಲೆ ಇರಿ.
ನಂತರ ಇದಕ್ಕೆ ಏಲಕ್ಕಿ ಪುಡಿ, ಮೆಲನ್ ಬೀಜಗಳನ್ನು ಹಾಕಿ ಗ್ಯಾಸ್ ಆಫ್ ಮಾಡಿ. ರುಚಿಕರವಾದ ಸೇಬುಹಣ್ಣಿನ ಹಲ್ವಾ ಸವಿಯಲು ಸಿದ್ಧವಾಗುತ್ತದೆ.