ಮೇ 2021ರಲ್ಲಿ, ಕೋವಿಡ್ ಎರಡನೇ ಅಲೆ ಜೋರಾಗಿದ್ದ ಸಂದರ್ಭದಲ್ಲಿ ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಕೊರತೆ ಇದೆ ಎಂಬ ಭೀತಿ ಆವರಿಸಿದ್ದ ಸಂದರ್ಭವನ್ನೇ ದಂಧೆ ಮಾಡಲು ಅವಕಾಶ ಮಾಡಿಕೊಂಡಿದ್ದ ರ‍್ಯಾಕೆಟ್ ಒಂದನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.
ವಾಟ್ಸಾಪ್ ಫಾರ್ವರ್ಡ್ ಸಂದೇಶದ ಮೂಲಕ ದೂರವಾಣಿ ಸಂಖ್ಯೆಯೊಂದನ್ನು ಕೊಟ್ಟು ಆಮ್ಲಜನಕದ ಸಿಲಿಂಡರ್‌ಗಳನ್ನು ತ್ವರಿತವಾಗಿ ಪೂರೈಕೆ ಮಾಡುವುದಾಗಿ ಹೇಳಿ ಎಸ್‌ಬಿಐ ಬ್ಯಾಂಕಿನ ಖಾತೆಯೊಂದಕ್ಕೆ 25,000 ರೂ.ಗಳನ್ನು ಜಮಾ ಮಾಡಲು ಕೇಳಲಾಗುತ್ತಿತ್ತು. ದುಡ್ಡು ಕಟ್ಟಿ ಗಂಟೆಗಳು ಕಾದರೂ ಸಹ ಆಮ್ಲಜನಕ ಬರುತ್ತಲೇ ಇರಲಿಲ್ಲ.
ತಮ್ಮ ಮಡದಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಾಗ ಇಂಥದ್ದೇ ಸನ್ನಿವೇಶಕ್ಕೆ ಸಿಲುಕಿದ್ದ ವಿನೋದ್ ಕುಮಾರ್ ಹೆಸರಿನ ವ್ಯಕ್ತಿಯೊಬ್ಬರು ದೆಹಲಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆರು ತಿಂಗಳ ಬಳಿಕ ಈ ದಂಧೆ ನಡೆಸುತ್ತಿದ್ದ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಕಿಂಗ್‌ಪಿನ್‌ಗಳು ಬಿಹಾರದವರಾಗಿದ್ದಾರೆ.
Big News: ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 7 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ
ಪಿಎಚ್‌ಡಿ ವ್ಯಾಸಾಂಗ ಮಾಡುತ್ತಿರುವ ಪವನ್ ಕುಮಾರ್ ಹಾಗೂ ಎಂಸಿಎ ಪದವೀಧರ ಕಮಾಲ್ ಕಾಂತ್ ಆ ಇಬ್ಬರು ಕಿಂಗ್‌ಪಿನ್‌ಗಳಾಗಿದ್ದಾರೆ. ಪವನ್ ಕುಮಾರ್ ಕೋಚಿಂಗ್ ಕೇಂದ್ರವೊಂದರಲ್ಲಿ ಪ್ರವಚನ ನೀಡುತ್ತಾನೆ.
ದೆಹಲಿ ಪೊಲೀಸ್‌ನ ವಿಶೇಷ ವಿಭಾಗವಾದ ಗುಪ್ತಚರ ಸಮ್ಮಿಲನ ಮತ್ತು ವ್ಯೂಹಾತ್ಮಕ ಕಾರ್ಯಾಚರಣೆ ಘಟಕ (ಐಎಫ್‌ಎಸ್‌ಓ) ಆಪಾದಿತರನ್ನು ಬಿಹಾರ ಮತ್ತು ಪಶ್ಚಿಮ ಬಂಗಾಳಗಳಿಂದ ಬಂಧಿಸಿ ಕರೆತಂದಿದ್ದಾರೆ. ಬಂಧಿತರಿಂದ 9 ಫೋನ್‌ಗಳು, ಒಂದು ಲ್ಯಾಪ್ಟಾಪ್, 11 ಸಿಮ್ ಕಾರ್ಡ್‌ಗಳು, 7 ಏಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
15 ದಿನಗಳ ಅವಧಿಯಲ್ಲಿ 1000 ಮಂದಿಗೆ ವಂಚನೆ ಮಾಡಿದ ಈ ಮಂದಿ, 1.4 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.