ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ವಿರುದ್ಧ ವಂಚನೆ ಆರೋಪದ ಸಂಬಂಧ ದೆಹಲಿ ಉದ್ಯಮಿ ನೀಡಿದ ದೂರಿನ ಸಂಬಂಧ ಪೊಲೀಸರು ಯಾವೆಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಬಗ್ಗೆ ದೆಹಲಿ ಕೋರ್ಟ್ ಮಾಹಿತಿ ಕೇಳಿದೆ. ಈ ಸಂಬಂಧ ಪ್ರಕರಣದ ವಿಚಾರಣೆಯನ್ನು ನವೆಂಬರ್ 9ಕ್ಕೆ ಮುಂದೂಡಲಾಗಿದೆ ಎಂದು ದೂರುದಾರ ಪರ ವಕೀಲ ಹೇಳಿದ್ದಾರೆ.
2018ರಲ್ಲಿ ಮುಂಬೈ ಮೂಲದ ಕಂಪನಿಯೊಂದರಲ್ಲಿ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡುವಂತೆ ಹೇಳಿ ಪ್ರೇರೆಪಿಸಿ ವಂಚನೆ ಮಾಡಲಾಗಿದೆ ಎಂದು ವಿಶಾಲ್ ಗೋಯಲ್ ಆರೋಪಿಸಿದ್ದಾರೆ. ಬಳಿಕ ಈ ದಂಪತಿ ತಮಗೆ ಯಾವುದೆ ಲಾಭದ ಮೊತ್ತ ನೀಡಿಲ್ಲ ಹಾಗೂ ಷೇರು ಮೌಲ್ಯ ಕೂಡ ಕುಸಿದಿದೆ ಎಂದು ಆರೋಪಿಸಿದ್ದಾರೆ.
ಸ್ವಾರ್ಥದ ಕೆಲಸಕ್ಕೆ ಈ ಹಣವನ್ನು ಹೂಡಿಕೆ ಮಾಡಲು ಪ್ಲಾನ್ ಮಾಡಿದ್ದ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಉದ್ದೇಶಪೂರ್ವಕವಾಗಿಯೇ ನಮಗೆ 41, 33,782 ರೂಪಾಯಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಈ ಹಣವನ್ನು ದಂಪತಿ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ ಹಾಗೂ ಕಾನೂನುಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಮಗೆ ಕೆಲ ದಿನಗಳ ಹಿಂದಷ್ಟೇ ಈ ಕಂಪನಿಯು ಅಶ್ಲೀಲ ವಿಡಿಯೋಗಳನ್ನು ಮಾಡುವ ಕೆಲಸ ಮಾಡುತ್ತಿದೆ ಎಂಬ ವಿಚಾರ ತಿಳಿಯಿತು ಎಂದು ಗೋಯಲ್ ಹೇಳಿದ್ದಾರೆ. ತಾವು ಹಣ ಹೂಡಿಕೆ ಮಾಡುವ ವೇಳೆ ಕಂಪನಿಯು ಸೌಂದರ್ಯ ವರ್ಧಕ, ಆ್ಯನಿಮೇಷನ್ ಹಾಗೂ ಗೇಮಿಂಗ್ ಅಪ್ಲಿಕೇಶನ್ಗಳನ್ನು ಮಾರಾಟ ಮಾಡುತ್ತದೆ ಎಂದು ನಂಬಿಸಿದ್ದರು ಎಂದು ಗೋಯಲ್ ಹೇಳಿದ್ದಾರೆ.