ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಒಂದು ದಿನದಲ್ಲಿಯೇ 2004, 2009, 2014 ಮತ್ತು 2020 ರಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.
ಐಟಿ ನೋಟಿಸ್ ಸಂಬಂಧ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಐಟಿ ಇಲಾಖೆಯಿಂದ ಲವ್ ಲೆಟರ್ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದೇ ಐದು ವರ್ಷಗಳ ಹಿಂದೆ ನಮಗೆ ಇಡಿ ಎಂದರೆ ಏನು ಎಂದೇ ತಿಳಿದಿರಲಿಲ್ಲ. ಆದರೆ ಇದು ಕೇಂದ್ರದ ತನಿಖಾ ಏಜೆನ್ಸಿಗಳನ್ನು ಬಳಸಿಕೊಂಡು ಈ ರೀತಿಯ ರಾಜಕೀಯ ಮಾಡಲಾಗ್ತಿದೆ ಎಂದು ಶರದ್ ಪವಾರ್ ಆಕ್ರೋಶ ಹೊರ ಹಾಕಿದ್ರು.
ನಾನು 2009ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಬಳಿಕ 2014ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದೆ. 2020ರಲ್ಲಿಯೂ ಕಣಕ್ಕಿಳಿದಿದ್ದೇನೆ. ಇದೀಗ ನನಗೆ ರಾಜ್ಯಸಭಾ ಚುನಾವಣೆಯ ಅಫಿಡವಿಟ್ಗೆ ಸಂಬಂಧಿಸಿದಂತೆ ನೋಟಿಸ್ ಬಂದಿದೆ. 2004ರ ಚುನಾವಣೆಯ ಅಫಿಡವಿಟ್ ಕುರಿತಂತೆ ತನಿಖೆ ನಡೆಸಲು ಈ ನೋಟಿಸ್ ಕಳಿಸಿದ್ದಾರೆ ಎಂದು ಹೇಳಿದ್ದಾರೆ.