ಉತ್ತರ ಪ್ರದೇಶದ ಪೊಲೀಸ್ ಮೆಸ್ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಕಾನ್ ಸ್ಟೇಬಲ್ ಅಸಮಾಧಾನ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಕಣ್ಣೀರಿಟ್ಟ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಾದ ಒಂದು ವಾರದ ನಂತರ ಇದೇ ರೀತಿಯ ಮತ್ತೊಂದು ವಿಡಿಯೋ ಹೊರಹೊಮ್ಮಿದ್ದು, ಮೈನ್ಪುರಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಕಮಲೇಶ್ ದೀಕ್ಷಿತ್ ದಾಲ್-ರೋಟಿ ಬಗ್ಗೆ ದೂರು ಹೇಳಿಕೊಂಡಿದ್ದಾರೆ.
ಸ್ಥಳೀಯ ಪೊಲೀಸ್ ವ್ಯವಸ್ಥೆ ಅವ್ಯವಸ್ಥೆಯನ್ನು ತೋರಿಸಿದ್ದು, ದಾಲ್ನ ದೊಡ್ಡ ಪಾತ್ರೆಯೊಳಗೆ ಒಂದು ಚಮಚವನ್ನು ಹಾಕಿ ನಂತರ, “ಇದು ಕೇವಲ ನೀರು” ಎಂದು ಹೇಳುವುದೂ ಸಹ ವಿಡಿಯೋದಲ್ಲಿ ಕಾಣಿಸುತ್ತದೆ.
ಆಗಸ್ಟ್ 11ರಂದು ಫಿರೋಜಾಬಾದ್ ಕಾನ್ ಸ್ಟೇಬಲ್ ಮನೋಜ್ ಕುಮಾರ್ ಅವರು ಒಂದು ತಟ್ಟೆಯಲ್ಲಿ ದಾಲ್, ರೊಟ್ಟಿ ಮತ್ತು ಅನ್ನವನ್ನು ತಂದು ರಸ್ತೆಯಲ್ಲಿ ಅಳುತ್ತಿದ್ದರು ಆಗ ಹಿರಿಯ ಅಧಿಕಾರಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಆಹಾರದ ಗುಣಮಟ್ಟದ ಬಗ್ಗೆ ದೂರು ನೀಡಿದರೂ ಯಾವುದೇ ಸುಧಾರಣೆಯಾಗಿಲ್ಲ ಎಂದು ಅವರು ಆರೋಪಿಸಿದ್ದರು.
ನಮ್ಮೆಲ್ಲರಿಗೂ ಮೆಸ್ನಲ್ಲಿ ನೀರಿರುವ ದಾಲ್ ಮತ್ತು ಬೇಯಿಸದ ರೊಟ್ಟಿಗಳನ್ನು ನೀಡಲಾಗುತ್ತದೆ. ಪೊಲೀಸ್ ಸಿಬ್ಬಂದಿಗೆ ಪೌಷ್ಠಿಕ ಆಹಾರ ನೀಡಲು ರಾಜ್ಯ ಸರ್ಕಾರ ಭತ್ಯೆ ನೀಡುತ್ತದೆ ಎಂದು ಸಿಎಂ ಘೋಷಿಸಿದ್ದರು. ಆದರೆ 12 ಗಂಟೆಗಳ ಕರ್ತವ್ಯದ ನಂತರ ನಮಗೆ ಸಿಗುವುದು ಇದೇ. ಸರಿಯಾದ ಆಹಾರ ತೆಗೆದುಕೊಳ್ಳದಿದ್ದರೆ ನಾವು ಹೇಗೆ ಕೆಲಸ ಮಾಡಬೇಕು ಎಂದು ಕಾನ್ ಸ್ಟೇಬಲ್ ವಿಡಿಯೋದಲ್ಲಿ ಹೇಳಿದ್ದಾರೆ.