ಸೋಲು, ಗೆಲುವಿಗೆ ಮೊದಲನೇ ಮೆಟ್ಟಿಲು ಅಂತಾರೆ. ಇಲ್ಲೊಬ್ಬ ವೃದ್ಧ ಈ ಮಾತನ್ನು ಸಿಕ್ಕಾಪಟ್ಟೆ ಗಂಭೀರವಾಗಿ ತೆಗೆದುಕೊಂಡಂತೆ ಕಾಣ್ತಿದೆ. 30ಕ್ಕೂ ಅಧಿಕ ಬಾರಿ ಚುನಾವಣೆಯಲ್ಲಿ ಸೋತ ಬಳಿಕವೂ 78 ವರ್ಷದ ಟೀತಾರ್ ಸಿಂಗ್ ಈ ವರ್ಷ ರಾಜಸ್ಥಾನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಗ್ರಾಮ ಪಂಚಾಯತ್ನಿಂದ ಹಿಡಿದು ಲೋಕಸಭಾ ಚುನಾವಣೆವರೆಗೆ 1970ರ ದಶಕದಿಂದ ಈವರೆಗೆ ಟೀತಾರ್ ಸಿಂಗ್ 31 ಚುನಾವಣೆಗಳನ್ನು ಎದುರಿಸಿದ್ದಾರೆ. ಒಂದು ಬಾರಿಯೂ ಟೀತಾರ್ ಸಿಂಗ್ ಚುನಾವಣೆಯಲ್ಲಿ ಗೆಲುವನ್ನು ಕಂಡಿಲ್ಲ. ಆದರೆ ಜನರ ಹಕ್ಕುಗಳಿಗಾಗಿ ನಾನು ಹೋರಾಡಬೇಕು ಎಂಬ ಉತ್ಸಾಹದಿಂದ ಟೀತಾರ್ ಸಿಂಗ್ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೇ ಚುನಾವಣೆಗಳಿಗೆ ಸ್ಪರ್ಧಿಸುತ್ತಲೇ ಇದ್ದಾರೆ.
ರಾಜಸ್ಥಾನದ ಕರಣಪುರ ವಿಧಾನಸಭಾ ಕ್ಷೇತ್ರದಿಂದ ತೀತರ್ ಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗಾಗಲೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಟೀತಾರ್ ಸಿಂಗ್ ಪೂರ್ಣಗೊಳಿಸಿದ್ದಾರೆ. ನಾನು 32ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಅಂತಾ ಟೀತಾರ್ ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇಲ್ಲಿಯವರೆಗೆ 31 ಚುನಾವಣೆಗಳಲ್ಲಿ ಸೋತಿರುವ ನಿಮಗೆ ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಬೇಕು ಅಂತಾ ಏಕೆ ಎನಿಸಿತು ಎಂದು ಪ್ರಶ್ನಿಸಿದ್ರೆ ನಾನೇಕೆ ಹೋರಾಡಬಾರದು ಅಂತಾ ಟೀತಾರ್ ಸಿಂಗ್ ಮರುಪ್ರಶ್ನೆ ಮಾಡ್ತಾರೆ. ನಾನು ಜನಪ್ರಿಯತೆ ಗಳಿಸಲೋ ಅಥವಾ ದಾಖಲೆಗಳಿಗಾಗಿ ಚುನಾವಣೆಗಳಿಗೆ ಸ್ಪರ್ಧಿಸುತ್ತಿಲ್ಲ. ಚುನಾವಣೆ ಅನ್ನೋದು ಹೋರಾಟ ಇದ್ದಂತೆ. ನಾನು ಜನರಿಗಾಗಿ ಕೊನೆವರೆಗೂ ಹೋರಾಡುತ್ತೇನೆ ಎಂದು ಹೇಳಿದರು.