ಅಬ್ಡೋಮಿನಲ್ ಪ್ಲಾಂಕ್ ವ್ಯಾಯಾಮವು ನಮ್ಮ ದೈಹಿಕ ಹಾಗೂ ಮಾನಸಿಕ ಗಟ್ಟಿತನಕ್ಕೆ ದೊಡ್ಡ ಸವಾಲೆಸೆಯುವಂಥ ಚಟುವಟಿಕೆ. ಬರೀ ಒಂದೆರಡು ನಿಮಿಷಗಳ ಮಟ್ಟಿಗೆ ಈ ಪ್ಲಾಂಕ್ ಸ್ಥಿತಿಯನ್ನು ನಿಭಾಯಿಸುವಷ್ಟರಲ್ಲಿ ನಮ್ಮಲ್ಲಿ ಬಹುತೇಕರು ಹೈರಾಣಾಗಿಬಿಡುತ್ತಾರೆ.
ಜ಼ೆಕ್ ಗಣರಾಜ್ಯದ ಅಥ್ಲೀಟ್ ಜೋಸೆಫ್ ಸಾಲೆಕ್ ಬಿನ್ ಜೋಸ್ಕಾ ಅವರು ಅಬ್ಡೋಮಿನಲ್ ಪ್ಲಾಂಕ್ ಭಂಗಿಯಲ್ಲಿ ನಿರಂತರ 9 ಗಂಟೆ, 38 ನಿಮಿಷ, 47 ಸೆಕೆಂಡ್‌ಗಳ ಕಾಲ ಇದ್ದು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ ಅವರು 9 ಗಂಟೆ, 30 ನಿಮಿಷಗಳು, 1 ಸೆಕೆಂಡ್ ಕಾಲ ಅಬ್ಡೋಮಿನಲ್ ಪ್ಲಾಂಕ್ ಭಂಗಿಯಲ್ಲಿ ಇದ್ದು ನಿರ್ಮಿಸಿದ್ದ ಹಿಂದಿನ ದಾಖಲೆಯನ್ನು ಜೋಸ್ಕಾ ಇದೀಗ ಮುರಿದಿದ್ದಾರೆ.
ಜೋಸ್ಕಾರ ಈ ಪರಿಕ್ರಮವನ್ನು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಶೇರ್ ಮಾಡಲಾಗಿದೆ.
“ಐದು ವರ್ಷಗಳ ಹಿಂದೆ ನಾನು 15 ಕೆಜಿಯಷ್ಟು ಹೆಚ್ಚಿನ ತೂಕ ಹೊಂದಿದ್ದೆ. ಅಲ್ಲದೇ ವಿಪರೀತ ಮದ್ಯಪಾನ ಹಾಗೂ ಧೂಮಪಾನದ ವ್ಯಸನಿಯೂ ಆಗಿದ್ದೆ. ಆದರೆ ಜೀವನದ ಮುಖ್ಯ ನಿರ್ಧಾರವೊಂದನ್ನು ತೆಗೆದುಕೊಂಡು ನಾನೀಗ ಈ ಬದಲಾವಣೆ ಕಂಡಿದ್ದೇನೆ. ನಿಮ್ಮ ವಯಸ್ಸು ಏನೇ ಇರಲಿ, ಬದಲಾವಣೆಗಳ ಮೂಲಕ ನೀವು ಜೀವನವನ್ನು ಇನ್ನಷ್ಟು ಸಂತಸಮಯ, ಆರೋಗ್ಯಮಯ ಹಾಗೂ ಉಲ್ಲಾಸಮಯವಾಗಿಸಬಹುದಾಗಿದೆ,” ಎಂದು ಹೇಳುವ ಜೋಸ್ಕಾ, “ಇದೇ ಸಂದೇಶವನ್ನು ನಾನು ಈ ವಿಶ್ವ ದಾಖಲೆ ಮೂಲಕ ಸಾರಲು ಇಚ್ಛಿಸುತ್ತೇನೆ,” ಎಂದಿದ್ದಾರೆ.