ಮುಟ್ಟಿನ ಕಪ್ಗಳ ಬಳಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಎರ್ನಾಕುಲಂ ಸಂಸದ ಹೈಬಿ ಈಡನ್ ಕಪ್ ಆಫ್ ಲೈಫ್ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು 24 ಗಂಟೆಗಳ ಒಳಗೆ ತಮ್ಮ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಮುಟ್ಟಿನ ಕಪ್ಗಳನ್ನು ಉಚಿತವಾಗಿ ವಿತರಿಸುವ ಗುರಿಯನ್ನು ಹೊಂದಿದೆ.
ಜಿಲ್ಲಾಡಳಿತದ ಸಹಯೋಗದಲ್ಲಿ ಆ.30ರಂದು ಜಿಲ್ಲೆಯ 100 ಕೇಂದ್ರಗಳಲ್ಲಿ ಋತುಚಕ್ರದ ಕಪ್ ವಿತರಿಸಲಾಗುವುದು. ಕೊಚ್ಚಿನ್ ಮತ್ತು ಎರ್ನಾಕುಲಂ ಜಿಲ್ಲಾಡಳಿತದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುತ್ತೂಟ್ ಬೆಂಬಲಕ್ಕೆ ನಿಂತಿದೆ. ಕಪ್ ಆಫ್ ಲೈಫ್ ಲಾಂಛನವನ್ನು ಕೊಚ್ಚಿನ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ)ದಲ್ಲಿ ನಟ ಜಯಸೂರ್ಯ ಬುಧವಾರ ಬಿಡುಗಡೆ ಮಾಡಿದರು.
ಕಪ್ ಆಫ್ ಲೈಫ್ ಅಭಿಯಾನಕ್ಕೂ ಮುನ್ನ ವಾರ್ಡ್ 17ರಲ್ಲಿ ಮುಟ್ಟಿನ ಕಪ್ ವಿತರಿಸಲಾಗಿತ್ತು. ಕುಂಬಳಂಗಿಯಲ್ಲಿ 4,000 ಮಹಿಳೆಯರು ಕಪ್ಗಳ ಪ್ರಯೋಜನ ಪಡೆದರು ಎಂದು ಸಂಸದರು ಹೇಳಿದರು. ಈ ಹಿಂದೆ, ‘ಬ್ರೇಕಿಂಗ್ ಬ್ಯಾರಿಯರ್ಸ್’ ಯೋಜನೆಯಡಿ, ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳು ಮತ್ತು ಇನ್ಸಿನರೇಟರ್ಗಳನ್ನು ಪರಿಚಯಿಸಲಾಗಿತ್ತು. ಆದರೆ, ಪ್ಯಾಡ್ಗಳಿಂದ ಶೌಚಾಲಯಗಳಲ್ಲಿ ಸಮಸ್ಯೆಯಾಯಿತು. ಮುಟ್ಟಿನ ಕಪ್ಗಳು ಪರ್ಯಾಯವಾಗಿ ಕಾಣಿಸಿದೆ.
ಸ್ಯಾನಿಟರಿ ಪ್ಯಾಡ್ಗಳು ಮತ್ತು ಡೈಪರ್ಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವು ದೊಡ್ಡ ಪ್ರಮಾಣದಲ್ಲಿರುತ್ತವೆ. ಅವುಗಳನ್ನು ನಿರ್ವಹಣೆ ಮಾಡುವ ಸೂಕ್ತ ವ್ಯವಸ್ಥೆ ಇಲ್ಲ. ಭಾರತದಲ್ಲಿ, ಪ್ರತಿ ವರ್ಷ ಸುಮಾರು 12 ಬಿಲಿಯನ್ ಪ್ಯಾಡ್ಗಳನ್ನು ವಿಲೇವಾರಿ ಮಾಡಲಾಗುತ್ತದೆ. ಮಹಿಳೆ ಪ್ರತಿ ತಿಂಗಳು ಪ್ಯಾಡ್ಗಳಿಗೆ ಕನಿಷ್ಠ 60 ರಿಂದ 80 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸುಮಾರು ಏಳರಿಂದ 10 ವರ್ಷಗಳವರೆಗೆ ಬಾಳಿಕೆ ಬರುವ ಕಪ್ನ ಬೆಲೆ 100 ರಿಂದ 300 ರೂ. ಆಗಿರುತ್ತದೆ.