ಕೋವಿಡ್ 19 ನಿಯಮಗಳನ್ನ ಉಲ್ಲಂಘಿಸಿ ಲಾಕ್ಡೌನ್ ಸಂದರ್ಭದಲ್ಲಿ ಬರ್ತಡೇ ಪಾರ್ಟಿ ಮಾಡಲು ಯುವಕರು ಒಂದೆಡೆ ಸೇರಿದ್ದು ಮಾತ್ರವಲ್ಲದೇ ಚಾಕು ಹಾಗೂ ಖಡ್ಗವನ್ನ ಹಿಡಿದು ಸಂಭ್ರಮಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ನಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಲಾಕ್ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಧ್ಯ ರಾತ್ರಿ ಹೊತ್ತಲ್ಲಿ ಆರಕ್ಕೂ ಹೆಚ್ಚು ಮಂದಿ ಸೇರಿ ಕೈಯಲ್ಲಿ ಚಾಕು ಹಾಗೂ ಖಡ್ಗಗಳನ್ನ ಹಿಡಿದು ನರ್ತಿಸಿದ್ದಾರೆ. ಬರ್ತಡೆ ನಿಮಿತ್ತ ಇಬ್ಬರ ದೊಡ್ಡ ಫೋಟೋಗಳು ಫ್ಲೆಕ್ಸ್ಗಳಲ್ಲಿ ರಾರಾಜಿಸುತ್ತಿದ್ದವು. ಈ ಯುವಕರ ಗುಂಪಿನಲ್ಲಿ ಯಾರು ಕೂಡ ಫೇಸ್ ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಪಾಡಿದ್ದು ಕೂಡ ಕಂಡುಬರಲಿಲ್ಲ.
ಈ ಘಟನೆ ಸಂಬಂಧ ಹಬೀಬ್ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 25, ಸೆಕ್ಷನ್ 188 ಹಾಗೂ 269ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ 9 ಮಂದಿಯನ್ನ ಬಂಧಿಸಲಾಗಿದ್ದು ಶೀಘ್ರದಲ್ಲೇ ಕೋರ್ಟ್ಗೆ ಹಾಜರುಪಡಿಸೋದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.