alex Certify ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಶಾಸಕ ಎಸ್. ಟಿ. ಸೋಮಶೇಖರ್‌ ಗೆ ʻಬಹಿರಂಗ ಪತ್ರʼ ಬರೆದ ಸುರೇಶ್‌ ಕುಮಾರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಶಾಸಕ ಎಸ್. ಟಿ. ಸೋಮಶೇಖರ್‌ ಗೆ ʻಬಹಿರಂಗ ಪತ್ರʼ ಬರೆದ ಸುರೇಶ್‌ ಕುಮಾರ್‌

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕ ಎಸ್.ಟಿ. ಸೋಮಶೇಖರ್‌ ಗೆ ಸುರೇಶ್‌ ಕುಮಾರ್‌ ಅವರು ಬಹಿರಂಗ ಪತ್ರ ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುರೇಶ್‌ ಕುಮಾರ್‌ ಅವರು ಪತ್ರ ಬರೆದು ಪೋಸ್ಟ್‌ ಮಾಡಿದ್ದು, ಪತ್ರದ ವಿವರ ಇಲ್ಲಿದೆ. ಯಶವಂತಪುರದ ಶಾಸಕರಾದ ಸನ್ಮಾನ್ಯ ಶ್ರೀ ಎಸ್ ಟಿ ಸೋಮಶೇಖರ್ ಅವರಿಗೆ ನಮಸ್ಕಾರಗಳು.  ನಾನೊಬ್ಬ ಬಿಜೆಪಿ ಕಾರ್ಯಕರ್ತನಾಗಿ ಬಹಳ ಯೋಚನೆಯ ನಂತರ ಈ ಪತ್ರ ಬರೆಯುತ್ತಿದ್ದೇನೆ.

ತಾವು ಉತ್ತರ ಹಳ್ಳಿಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದ ಆ ದಿನಗಳಿಂದ ತಮ್ಮನ್ನು ನೋಡುತ್ತಾ ಬಂದಿದ್ದೇನೆ. ವಿಶೇಷವಾಗಿ ಕ್ಷೇತ್ರ ವಿಂಗಡನೆಯ ತರುವಾಯ ಯಶವಂತಪುರ ಕ್ಷೇತ್ರದಲ್ಲಿ 2008ರಲ್ಲಿ ತಾವು ನಮ್ಮ ಪಕ್ಷದ ಶೋಭಾ ಕರಂದ್ಲಾಜೆ ವಿರುದ್ಧ ಸ್ಪರ್ಧಿಸಿದಾಗಲೂ ತಮ್ಮನ್ನು ಗಮನಿಸಿದ್ದೆ.

 2012 ಮತ್ತು 2018ರಲ್ಲಿ ತಾವು ಆ ಕ್ಷೇತ್ರದಲ್ಲಿ ಜಯಗಳಿಸುವುದರಲ್ಲಿ ಯಶಸ್ವಿಯಾದಿರಿ. ಅಂದಿನಿಂದ ನನ್ನ ನಿಮ್ಮ ಸಂಬಂಧ ಆತ್ಮೀಯವಾಗಿಯೇ ಇದೆ ಎಂಬುದು ತಮಗೆ ಗೊತ್ತುಂಟು. 2019 ರಲ್ಲಿ ತಾವು ತಮ್ಮ ಕ್ಷೇತ್ರಕ್ಕೆ ಹಾಗೂ ತಾವು ಸೇರಿದ್ದ ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾಗ ಅಚ್ಚರಿ ಪಟ್ಟವರಲ್ಲಿ ನಾನೂ ಒಬ್ಬ. ಆ ಕಾರಣ ನಿಮಗೆ ಗೊತ್ತು. ಆದರೆ ಆ ರೀತಿ ರಾಜೀನಾಮೆ ಕೊಟ್ಟ ದೊಡ್ಡ ಗುಂಪಲ್ಲಿ ತಾವು ಒಬ್ಬರಾಗಿದ್ರಿ. ನಂತರ ತಾವೆಲ್ಲ ಒಟ್ಟಾಗಿ ಬಿಜೆಪಿಗೆ ಸೇರಿದ್ದು ಉಪ ಚುನಾವಣೆಯಲ್ಲಿ ಜಯಗಳಿಸಿದ್ದು ಇತಿಹಾಸದ ಒಂದು ಭಾಗ.

ತಾವು ಯಶವಂತಪುರದ ಆ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಮ್ಮ ಬಿಜೆಪಿ ಕಾರ್ಯಕರ್ತರು ಯಾವ ರೀತಿ ಪರಿಶ್ರಮ ದಿಂದ ಕಾರ್ಯ ಮಾಡಿದ್ದರು ಎಂಬುದನ್ನು ನಾನು ಸ್ವತಃ ಕಂಡಿದ್ದೇನೆ.  ಅದೇ ರೀತಿ ನೆರೆಯ ಶ್ರೀ ಗೋಪಾಲಯ್ಯ ಅವರ ಕ್ಷೇತ್ರದಲ್ಲಿ ನಾನು ಸಹ ನನ್ನ ಚುನಾವಣೆಯಲ್ಲಿ ಕಾರ್ಯ ಮಾಡುವಂತೆಯೇ ಚುನಾವಣಾ ಕೆಲಸ ಮಾಡಿದ್ದೆ. (ಬೇಕಿದ್ದರೆ ಒಮ್ಮೆ ಗೋಪಾಲಯ್ಯನವರ ಬಳಿ ವಿಚಾರಿಸಿ.)

ನನ್ನ ಪಕ್ಷದ ಕಾರ್ಯಕರ್ತರು ನಿಮ್ಮ ಚುನಾವಣೆಯಲ್ಲಿ ಬೆವರು ಸುರಿಸಿ ಕೆಲಸ ಮಾಡಿದ್ದರು. ಯಾರೇ ಒಬ್ಬ ಕಾರ್ಯಕರ್ತ ನಿಮ್ಮನ್ನು ಹೊರಗಿನಿಂದ ಬಂದವರು ಎಂದು ಪರಿಗಣಿಸಲೇ ಇಲ್ಲ.  ಮತ್ತು ನನ್ನ ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ಯಾವ ರೀತಿ ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಾರೆ ಎಂಬುದು ನನಗೆ ದಶಕಗಳಿಂದ ಗೊತ್ತು.

ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತ ಕೆಲಸ ಮಾಡುವುದೇ ಹಾಗೆ. ಯಾವುದನ್ನು ಬಯಸದೆ ತನ್ನದೆಲ್ಲವನ್ನು ಕೊಡುವುದೇ ಅವನ ಸ್ವಭಾವ.  ಅಂತೂ ಎಲ್ಲರ ಶ್ರಮದಿಂದ ಮತ್ತು ತಾವು  ಸಂಪಾದಿಸಿದ್ದ ಹೆಸರಿಂದಲೂ ಸಹ ನೀವು ಆ ಚುನಾವಣೆಯಲ್ಲಿ ಜಯಗಳಿಸಿದ್ರಿ. ತದನಂತರ ತಾವು ನಮ್ಮ ಸರ್ಕಾರದಲ್ಲಿ ಸಹಕಾರ ಸಚಿವರಾದಿರಿ. ಅದು ತಮಗೆ ಇಷ್ಟವಾದ ಖಾತೆಯೂ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತು.

ನಂತರ ನಿಮ್ಮನ್ನು ಮೈಸೂರಿನಂತಹ ದೊಡ್ಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿದರು. ಅದು ನಿಮ್ಮ ಮೇಲೆ ಇಟ್ಟ ನಂಬಿಕೆ ಸಹ ಆಗಿತ್ತು. ಆಗ ಆ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತ ನಿಮಗೆ ಕೊಟ್ಟ ಪ್ರೀತಿ,  ಗೌರವವನ್ನು ನಾನು ಕಣ್ಣಾರೆ ಕಂಡಿದ್ದೇನೆ. ತಾವು ಸಹ ಅದಕ್ಕೆ ಪೂರಕವಾಗಿಯೇ ನಡೆದುಕೊಳ್ಳುತ್ತಿದ್ರಿ ಎಂಬುದು ಮುಖ್ಯವಾದ ವಿಚಾರ.

ನಾನು ಆಗಾಗ ಆ ಜಿಲ್ಲೆಯ ಕಾರ್ಯಕರ್ತರನ್ನು ಮಾತನಾಡಿಸುತ್ತಿದ್ದಾಗ ಅವರ ಬಾಯಿಂದ ಬರುತ್ತಿದ್ದದ್ದು ನಿಮ್ಮನ್ನು ಕುರಿತು ಕೇವಲ  ಗೌರವದ ಮಾತು. ಯಾರು ಎಂದಿಗೂ ನಿಮ್ಮ ಬಗ್ಗೆ ಅಗೌರವದ ಮಾತುಗಳನ್ನು ಉಪಯೋಗಿಸಲೇ ಇಲ್ಲ. ಅದು ನಮ್ಮ ಕಾರ್ಯಕರ್ತರ ಸ್ವಭಾವದಲ್ಲಿ ಎಂದೂ ಇಲ್ಲ ಮತ್ತು ಯಶವಂತಪುರದಲ್ಲಿಯೂ ನನ್ನ ಬಿಜೆಪಿ ಸ್ನೇಹಿತರನ್ನು ಕೇಳಿದಾಗಲಿಲ್ಲ ಅವರು ಗೌರವದಿಂದಲೇ, ಮೆಚ್ಚುಗೆಯಿಂದಲೇ ಮಾತನಾಡುತ್ತಿದ್ದರು.  ಹಾಗೂ ನಿಮ್ಮ ಕ್ಷೇತ್ರದಲ್ಲಿರುವ ನಮ್ಮ ಪರಿವಾರದ ಸಂಸ್ಥೆಗಳ ಪ್ರಮುಖರು ಸಹ ತಮ್ಮನ್ನು ನಮ್ಮ ಸಂಘಟನೆಯ ಒಂದು ಭಾಗ ಎಂದೇ ಪರಿಗಣಿಸಿ ಅತ್ಯಂತ ಗೌರವದಿಂದ ಸಂಭೋದಿಸುತ್ತಿದ್ದದ್ದನ್ನು ನಾನು ಕಂಡಿದ್ದೇನೆ. ತಾವು ಹೋದಾಗ ಅವರು ಎಷ್ಟು ಚೆನ್ನಾಗಿ ಉಪಚರಿಸುತ್ತಿದ್ದರು ಎಂಬುದನ್ನು ನಾನು ಬಲ್ಲೆ.

ನಂತರ ನಿಮಗೆ ಮತ್ತು ನನಗೆ ಗೊತ್ತಿರುವ ಕಾರಣಗಳಿಂದ ನಮ್ಮ ಸರ್ಕಾರ ಮತ್ತೆ ಆಡಳಿತಕ್ಕೆ ಬರಲು 2023ರಲ್ಲಿ ಸಾಧ್ಯವಾಗಲಿಲ್ಲ. ಇದು ಸಹಜ ಕೂಡ. ಒಂದು ಪಕ್ಷ ಯಾವಾಗಲೂ ಆಡಳಿತದಲ್ಲಿ ಇರಬೇಕು ಎಂಬುದು ಕಷ್ಟ ಸಾಧ್ಯ.  ಹಾಗೆಯೇ ಒಬ್ಬ ಚುನಾಯಿತ ಪ್ರತಿನಿಧಿ ಯಾವಾಗಲೂ ಆಡಳಿತ ಪಕ್ಷದಲ್ಲಿ ಇರಬೇಕು ಎಂಬುದನ್ನು ಬಯಸುವುದೂ ಸರಿಯಲ್ಲ.

ತಾವು ಬಹಳ ದಿನದ ಕಣ್ಣು ಮುಚ್ಚಾಟದ ನಂತರ ಈಗ ರಾಜ್ಯ ಸಭೆಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿ ಆತ್ಮಸಾಕ್ಷಿಯ ಹೆಸರಿನಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗೆ ತಮ್ಮ ಮತವನ್ನು ನೀಡಿ ಕೃತಾರ್ಥರಾಗಿದ್ದೀರಿ. (ಆತ್ಮಸಾಕ್ಷಿ ಎಂಬುದು ಅತ್ಯಂತ ಅನುಕೂಲಸಿಂಧು ಪದ ಎಂಬುದು ನಿಮಗೂ ಗೊತ್ತು).

ಕೆಲವು ದಿವಸಗಳ ಹಿಂದೆ ಪದವೀಧರ ಶಿಕ್ಷಕರ ಕ್ಷೇತ್ರದ ನಮ್ಮ NDA ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡಿದ್ದು ಸಾಲದೆ ಆಡಳಿತ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೀರಿ.  ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಒಂದೇ ವೇದನೆ. “ನಾವು ಸೋಮಶೇಖರ್ ರಿಗೆ ಏನು ಮಾಡಿದ್ದೆವು? ನಮ್ಮ. ಪ್ರೀತಿ ಗೌರವದಲ್ಲಿ ಅವರಿಗೇನು ಕೊರತೆ ಇತ್ತು?  ಕಾಂಗ್ರೆಸ್ ಕಾರ್ಯಕರ್ತರು ನಮಗಿಂತ ಹೆಚ್ಚು ಏನು ಕೊಡಬಲ್ಲರು?”.

ನಮ್ಮ ಪರಿವಾರದ ಪ್ರಮುಖರಿಗೂ ಅದೇ ಬೇಸರ. ನಾವು ಇಷ್ಟು ಚೆನ್ನಾಗಿ ನೋಡಿಕೊಂಡ, ನಂಬಿದ್ದ ಸೋಮಶೇಖರ್ ಹೀಗ್ಯಾಕೆ ಆದರು?” ಎಂದು.  ದೇವರು ನಿಮಗೆ ಒಳಿತು ಮಾಡಲಿ ಎಂದು ಪತ್ರದಲ್ಲಿ ಬರೆದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...