ಕೊಳೆತ ಸ್ಥಿತಿಯಲ್ಲಿರುವ ಅಮೂಲ್ ಲಸ್ಸಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಸಿಲ್ವರ್ ಸೀಲ್‌ಗಳನ್ನು ಪಂಕ್ಚರ್ ಮಾಡಿರುವ ಅಮೂಲ್ ಲಸ್ಸಿಯ ಪೊಟ್ಟಣಗಳನ್ನು ತೋರುವ ಈ ವಿಡಿಯೋದಲ್ಲಿ ಆ ಪೊಟ್ಟಣದಲ್ಲಿರುವ ಲಸ್ಸಿ ಕೊಳೆತ ಸ್ಥಿತಿಯಲ್ಲಿರುವಂತೆ ತೋರಲಾಗಿದೆ.
“ಲಸ್ಸಿಗೆ ಫಂಗಸ್ ಅಟಕಾಯಿಸಿಕೊಂಡಂತೆ ಕಾಣುವ ಈ ವಿಡಿಯೋ ವಾಟ್ಸಾಪ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಹತ್ತಿರದಿಂದ ನೋಡಿದಾಗ ಸಿಲ್ವರ್ ಸೀಲ್ ಮೇಲೆ ತೂತು ಮಾಡಿರುವುದು ಕಾಣುತ್ತದೆ. ಲಸ್ಸಿ ಕೊಳೆಯಲೆಂದು ಬಿಡಲಾಗಿದೆ. ಬೇಕಂತಲೇ ಈ ಕೆಲಸ ಮಾಡಲಾಗಿದ್ದು, ಅಮೂಲ್ ಇದರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಬೇಕು,” ಎಂದು ವಿಕ್ರಾಂತ್ ಟಿ ಹೆಸರಿನ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ಘಟನೆ ಜೋರಾಗಿ ಸುದ್ದಿಯಾದ ಬೆನ್ನಿಗೇ ಸ್ಪಷ್ಟೀಕರಣ ಕೊಟ್ಟಿರುವ ಅಮೂಲ್, “ಅಮೂಲ್ ಉತ್ಪನ್ನಗಳನ್ನು ಅದರ ಡೈರಿಗಳಲ್ಲಿರುವ ಸುಸಜ್ಜಿತ ಉಪಕರಣಗಳಿಂದ ತಯಾರಿಸಲಾಗಿದ್ದು, ಕಟ್ಟುನಿಟ್ಟಿನ ಗುಣಮಟ್ಟದ ಪರೀಕ್ಷೆಗಳನ್ನು ಹಾಗೂ ಪ್ಯಾಕೇಜಿಂಗ್ ತಪಾಸಣೆಗೆ ಒಳಪಡಿಸಲಾಗಿರುತ್ತದೆ. ವಾಟ್ಸಾಪ್‌ನಲ್ಲಿ ಸದ್ದು ಮಾಡಿರುವ ಫಂಗಸ್ ಪೀಡಿತ ಲಸ್ಸಿಯು ಪ್ಯಾಕ್‌ನ ಸೀಲ್‌ಗೆ ತೂತು ಮಾಡಿದ್ದರಿಂದ ಆಗಿದೆ. ಯಾವ ಕಾರಣಕ್ಕೂ ಹೀಗೆ ಲೀಕ್ ಆದ ಅಥವಾ ಕೆಟ್ಟಿರುವ ಪ್ಯಾಕ್‌ಗಳ ಖರೀದಿ ಮಾಡಬೇಡಿ,” ಎಂದು ಕೋರಿ ಸುತ್ತೋಲೆಯೊಂದನ್ನು ಟ್ವೀಟ್ ಮಾಡಿದೆ.