ಮೊಬೈಲ್ ಕ್ರೇಜ್ ಸಾಮಾನ್ಯವಾದದ್ದೇನಲ್ಲ. ಮಾರುಕಟ್ಟೆಗೆ ಹೊಸ ಮೊಬೈಲ್ ಪ್ರವೇಶವಾಗುತ್ತಿದ್ದಂತೆ ಯುವಜನತೆ ಅದರತ್ತ ಆಕರ್ಷಿತರಾಗುವುದು ಸಾಮಾನ್ಯವಾಗಿದೆ.
ಸದ್ಯ ಆ್ಯಪಲ್ ಐಫೋನ್ 14 ಪ್ರೋ ಕ್ರೇಜ್ ಹೆಚ್ಚಿದೆ. ಪ್ರತಿ ಬಾರಿ ಆಪಲ್ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದಾಗ ಪ್ರಪಂಚದಾದ್ಯಂತದ ಅಭಿಮಾನಿಗಳು ತಮ್ಮ ಉತ್ಸಾಹವನ್ನು ತೋರುತ್ತಾರೆ.
ಅಂತಹ ಕಟ್ಟಾ ಅಭಿಮಾನಿ ಕೊಚ್ಚಿ ಮೂಲದ ಉದ್ಯಮಿ ಐಫೋನ್ 14 ಪ್ರೋನ ನ ಮೊದಲ ಮಾಲೀಕರಲ್ಲಿ ಒಬ್ಬರಾಗಲು ದುಬೈಗೆ ಹಾರಿದ್ದಾರೆ.
ಧೀರಜ್ ಪಲ್ಲಿಯಿಲ್ ಅವರು ದುಬೈನ ಮಿಡಿರ್ಫ್ ಸೆಂಟರ್ನಲ್ಲಿರುವ ಪ್ರೀಮಿಯಂ ಮಾರಾಟಗಾರರಿಂದ ಆ್ಯಪಲ್ ಐಫೋನ್ 14 ಪ್ರೊವನ್ನು ಶುಕ್ರವಾರ (ಸೆಪ್ಟೆಂಬರ್ 16) ಬೆಳಿಗ್ಗೆ 7 ಗಂಟೆಗೆ ಖರೀದಿಸಿದ್ದಾರೆ.
ಅದೇ ದಿನಾಂಕದಂದು ಭಾರತದಲ್ಲಿ ಬಿಡುಗಡೆಯಾಗುವ ಗಂಟೆಗಳ ಮೊದಲು ಖರೀದಿಸಿದ್ದು, ಈ ಮೂಲಕ ಆ್ಯಪಲ್ ಐಫೋನ್ 14 ಪ್ರೋನ ಮೊದಲ ಗ್ರಾಹಕ ಎಂದೆನಿಸಿಕೊಳ್ಳಬೇಕೆಂಬ ಗುರಿಯನ್ನು ಈಡೇರಿಸಿಕೊಂಡಿದ್ದಾರೆ. ಪಲ್ಲಿಯಿಲ್ ಅವರು ಡೇರ್ ಪಿಕ್ಚರ್ಸ್ ಎಂಬ ಡಿಜಿಟಲ್ ಸಲಹಾ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಧೀರಜ್ ಅವರು ಐಫೋನ್ 14 ಪ್ರೊ ಫೋನ್ ಗಾಗಿ 1.29 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಜತೆಗೆ ಟಿಕೆಟ್ ದರ ಮತ್ತು ವೀಸಾ ಶುಲ್ಕಕ್ಕೆ 40 ಸಾವಿರ ರೂ. ವೆಚ್ಚ ಮಾಡಿದ್ದಾರೆ.
ಪಲ್ಲಿಯಿಲ್ ಅವರು ಐಫೋನ್ ಮಳಿಗೆಯಿಂದಲೇ ಮೊಬೈಲ್ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.
ಐಫೋನ್ 14 ಪ್ರೊ ಭಾರತದಲ್ಲಿ ಮಾರಾಟ ಪ್ರಾರಂಭವಾಗುವ ಗಂಟೆಗಳ ಮೊದಲು ನಾನು ದುಬೈನಲ್ಲಿ ಖರೀದಿಸಲು ನಿರ್ಧರಿಸಿದೆ. ಅಂಗಡಿಯ ಹೊರಗೆ ಸಾವಿರಾರು ಜನರು ಕಾಯುತ್ತಿರುವಾಗ ಫೋನ್ನ ಮೊದಲ ಗ್ರಾಹಕರಾಗಿ ಖರೀದಿಸಿದಾಗ ಅದು ವಿಶೇಷ ಅನುಭವ ನೀಡುತ್ತದೆ ಎಂದು ಪಲ್ಲಿಯಿಲ್ ಹೇಳಿದ್ದಾರೆ.
ಈ ಹಿಂದೆಯೂ ಸಹ, ಭಾರತದಲ್ಲಿ ತಮ್ಮ ಬಿಡುಗಡೆಯ ದಿನಾಂಕಕ್ಕಿಂತ ಮುಂಚಿತವಾಗಿ ಐಫೋನ್ ಮಾದರಿ ಖರೀದಿಸಲು ಪಲ್ಲಿಯಿಲ್ ದುಬೈಗೆ ಹಾರಿದ್ದರು.