ಶಿವಮೊಗ್ಗ: ತಾನು ಸಾಕಿದ ಹಸುಗಳ ವಿರುದ್ಧವೇ ರೈತರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.
ಹೊಳೆಹೊನ್ನೂರು ಸಮೀಪದ ಸಿದ್ಲಿಪುರ ರೈತ ರಾಮಯ್ಯ ಅವರು ನಾಲ್ಕು ಹಸುಗಳನ್ನು ಸಾಕಿದ್ದಾರೆ. ಅವು ಹಾಲು ಕೊಡುತ್ತಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಂದ ಹಾಗೆ, ರಾಮಯ್ಯ ಪ್ರತಿದಿನ ಬೆಳಗ್ಗೆ 8 ರಿಂದ 11 ಗಂಟೆಯವರೆಗೆ, ಸಂಜೆ 4 ರಿಂದ 6 ಗಂಟೆಯವರೆಗೆ ಹಸುಗಳನ್ನು ಮೇಯಿಸಿಕೊಂಡು ಬರುತ್ತಿದ್ದರಲ್ಲದೇ ಅವುಗಳನ್ನು ಚೆನ್ನಾಗಿ ಸಾಕಿದ್ದಾರೆ.
ಆದರೆ, ನಾಲ್ಕೈದು ದಿನಗಳಿಂದ ಹಾಲು ಕರೆಯಲು ಹೋದರೆ ಹಸುಗಳು ಒದೆಯುತ್ತಿವೆ ಎಂದು ಪೊಲೀಸರಿಗೆ ರಾಮಯ್ಯ ದೂರು ನೀಡಿದ್ದಾರೆ. ತಮ್ಮ ಪತ್ನಿ ಹಾಲು ಕರೆಯಲು ಹೋದರು ಕೂಡ ಹಸುಗಳು ಹಾಲು ಕೊಡದೆ ಕಾಡಿಸುತ್ತಿದ್ದು, ತಮಗೆ ನ್ಯಾಯ ದೊರಕಿಸಿಕೊಡಬೇಕು. ಬಂದೋಬಸ್ತ್ ಒದಗಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಆದರೆ, ಕಾನೂನಿನಲ್ಲಿ ಇಂತಹ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್ ಆಗಿದೆ.