12 ರಿಂದ 18 ವರ್ಷ ಪ್ರಾಯದ ಮಕ್ಕಳಿಗೆ ಜುಲೈ ಅಂತ್ಯ ಇಲ್ಲವೇ ಆಗಸ್ಟ್ ತಿಂಗಳ ಒಳಗಾಗಿ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಮಾಹಿತಿ ನೀಡಿದೆ.
ಜೈಡಸ್ ಕ್ಯಾಡಿಲಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಭಾಗಶಃ ಮುಕ್ತಾಯವಾಗಿದೆ. ಹೀಗಾಗಿ ಜುಲೈ ಅಂತ್ಯ ಇಲ್ಲವೇ ಆಗಸ್ಟ್ ತಿಂಗಳೊಳಗಾಗಿ ಈ ಲಸಿಕೆಯನ್ನ ಮಕ್ಕಳಿಗೆ ನೀಡಲಾಗುತ್ತದೆ ಎಂದು ಕೋವಿಡ್ 19 ಕಾರ್ಯ ಸಮೂಹದ ಅಧ್ಯಕ್ಷ ಡಾ. ಎನ್ ಕೆ ಅರೋರಾ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯವಿದೆ.
ದೇಶದಲ್ಲಿ ಕೊರೊನಾ ಮೂರನೇ ಅಲೆಯು ತಡವಾಗಿ ಆರಂಭವಾಗಬಹುದು ಎಂಬ ಐಸಿಎಂಆರ್ ಅಧ್ಯಯನದ ವಿಚಾರವಾಗಿಯೂ ಮಾತನಾಡಿದ ಅರೋರಾ, 6ರಿಂದ 8 ತಿಂಗಳ ಒಳಗಾಗಿ ದೇಶದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಲುವಾಗಿ 1 ಕೋಟಿಗೂ ಅಧಿಕ ಮಂದಿಗೆ ಪ್ರತಿನಿತ್ಯ ಲಸಿಕೆಯನ್ನ ನೀಡೋದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ರು. ಅಲ್ಲದೇ ಕೊರೊನಾ ಲಸಿಕೆ ಕುರಿತಾದ ವಿವಿಧ ತಪ್ಪು ಮಾಹಿತಿಗಳನ್ನ ಅಲ್ಲಗೆಳೆದ ಅರೋರಾ, ಕೊರೊನಾ ಲಸಿಕೆಗಳು 95 ರಿಂದ 96 ಪ್ರತಿಶತ ಸುರಕ್ಷಿತವಾಗಿದೆ ಎಂದು ಹೇಳಿದ್ರು.