ಬೆಳಗಾವಿ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಹೊಸ ಗೈಡ್ ಲೈನ್ ಪ್ರಕಟಿಸಿದೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ರಾಜಕೀಯ ರ್ಯಾಲಿಗಳಿಗೆ, ಪಾದಯಾತ್ರೆ, ರಥಯಾತ್ರೆಗಳಿಗೆ ಯಾವುದೇ ನಿರ್ಬಂಧವನ್ನು ಹೇರುತ್ತಿಲ್ಲ. ಆದರೆ ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲೇಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಪ್ರಮುಖವಾಗಿ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.
ಹೋಟೆಲ್, ಪಬ್, ಬಾರ್ ರೆಸ್ಟೋರಂಟ್ ಮಾಲೀಕರು, ಸಿಬ್ಬಂದಿಗಳಿಗೆ 2 ಡೋಸ್ ಲಸಿಕೆ ಕಡ್ಡಾಯ. ಮೂರನೇ ಡೋಸ್ ಪಡೆಯಲು ಸೂಚಿಸಲಾಗುವುದು. ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹೋಟೆಲ್, ರೆಸ್ಟೋರೆಂಟ್, ಪಬ್ ಗಳಲ್ಲಿ ಈಗಿರುವ ಸೀಟ್ ಗಳಿಗಿಂತ ಹೆಚ್ಚಿನ ಸೀಟ್ ವ್ಯವಸ್ಥೆ ಮಾಡುವಂತಿಲ್ಲ ಎಂದು ಹೇಳಿದರು.
ಹೊಸ ವರ್ಷಾಚರಣೆ ಮಾಡಿ ಆದರೆ ಕೋವಿಡ್ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಪ್ರಮುಖವಾಗಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ, ಇನ್ನಿತರ ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರು, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಮಕ್ಕಳು ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮ, ಸಂಭ್ರಮಾಚರಣೆಯ ಸಮಾರಂಭ, ಜನದಟ್ಟಣೆ ಪ್ರದೇಶಗಳಿಗೆ ಹೋಗದೇ ದೂರವಿರುವುದು ಉತ್ತಮ. ಆರೋಗ್ಯದ ದೃಷ್ಟಿಯಿಂದ ಹೆಚ್ಚು ಜನ ಸೇರುವ ಸ್ಥಳಗಳಿಗೆ ಹೋಗದಿರುವುದು ಒಳಿತು ಎಂದು ಸಲಹೆ ನೀಡಿದರು.