ಕೋವಿಡ್ 19 ವಿರುದ್ಧ ಹೋರಾಟಕ್ಕಾಗಿ ಸ್ವದೇಶದಲ್ಲೇ ನಿರ್ಮಾಣಗೊಂಡ ಕೋವ್ಯಾಕ್ಸಿನ್ ಲಸಿಕೆಯು ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶದ ಪಾಲಿಗೆ ಬಹುದೊಡ್ಡ ಅಸ್ತ್ರವಾಗಿ ಮಾರ್ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಲಸಿಕೆಯ ಜಾಗತಿಕ ಬಳಕೆಗೆ ಇನ್ನಷ್ಟೇ ಅನುಮೋದನೆ ನೀಡಬೇಕಿದೆ. ಅಲ್ಲದೇ ಈ ಸಂಬಂಧ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ಬಳಿ ಹೆಚ್ಚಿನ ಸ್ಪಷ್ಟನೆಯನ್ನು ನವೆಂಬರ್ 3ರ ಒಳಗಾಗಿ ನೀಡುವಂತೆ ಸೂಚನೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಅನುಮೋದನೆಯನ್ನು ಬಾಕಿ ಇರಿಸಿರುವ ಕಾರಣ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕ, ಭಾರತದಲ್ಲಿ ಕೋವ್ಯಾಕ್ಸಿನ್ ಸ್ವೀಕರಿಸಿದವರಿಗೆ ತಮ್ಮ ದೇಶಕ್ಕೆ ಪ್ರವೇಶ ನೀಡಲು ತಯಾರಿಲ್ಲ. ಹಾಗಾದರೆ ಯಾವೆಲ್ಲ ದೇಶಗಳು ಕೋವ್ಯಾಕ್ಸಿನ್ ಪಡೆದವರ ಆಗಮನಕ್ಕೆ ಅನುಮತಿ ನೀಡಿದೆ ಅನ್ನೋದರ ವಿವರ ಇಲ್ಲಿದೆ ನೋಡಿ.
ಓಮನ್ : ಭಾರತೀಯ ರಾಯಭಾರಿ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ ಓಮನ್ ರಾಷ್ಟ್ರವು ಕೋವ್ಯಾಕ್ಸಿನ್ಗೆ ಅನುಮೋದನೆ ನೀಡಿದೆ. ಆದ್ದರಿಂದ ಭಾರತದಿಂದ ಕೋವ್ಯಾಕ್ಸಿನ್ ಪಡೆದು ತೆರಳಿದವರು ಕ್ವಾರಂಟೈನ್ಗೆ ಒಳಗಾಗಬೇಕಾದ ಅವಶ್ಯಕತೆ ಇರೋದಿಲ್ಲ.
ಇರಾನ್ : ಇರಾನ್ ಕೂಡ ಕೋವ್ಯಾಕ್ಸಿನ್ ಪಡೆದ ಜನತೆಗೆ ದೇಶಕ್ಕೆ ಎಂಟ್ರಿ ನೀಡುತ್ತಿದೆ. ಕೊರೊನಾ ನೆಗೆಟಿವ್ ವರದಿ ಪ್ರಸ್ತುತ ಪಡಿಸಿದರೆ ಕ್ವಾರಂಟೈನ್ಗೆ ಒಳಗಾಗುವ ಅವಶ್ಯಕತೆ ಇರೋದಿಲ್ಲ. ಇಲ್ಲವಾದಲ್ಲಿ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿರಲಿದೆ.
ಫಿಲಿಪೈನ್ಸ್ : ಫಿಲಿಪೈನ್ಸ್ ಕೂಡ ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಮೊದಲ ಡೋಸ್ನಿಂದ ಎರಡನೇ ಡೋಸ್ 14 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ.
ಮಾರಿಷಸ್ : ಎರಡನೇ ಕೊವ್ಯಾಕ್ಸಿನ್ ಡೋಸ್ ಪಡೆದು 14 ದಿನಗಳನ್ನು ಪೂರೈಸಿದವರು ಮಾರಿಷಸ್ಗೆ ಎಂಟ್ರಿ ಕೊಡಬಹುದಾಗಿದೆ. ಆದರೆ ಜಾನ್ಸನ್ & ಜಾನ್ಸನ್ ಸಿಂಗಲ್ ಡೋಸ್ ಪಡೆಯುವವರು 28 ದಿನಗಳ ಬಳಿಕ ಮಾರಿಷಸ್ಗೆ ಎಂಟ್ರಿ ನೀಡಬಹುದು. ಅಲ್ಲದೇ ಕೊರೊನಾ ನೆಗೆಟಿವ್ ವರದಿ ಕೂಡ ಕಡ್ಡಾಯವಾಗಿದೆ.
ಮೆಕ್ಸಿಕೋ : ಭಾರತದ ಕೋವ್ಯಾಕ್ಸಿನ್ ಲಸಿಕೆಗಳಿಗೆ ಮೆಕ್ಸಿಕೋದಲ್ಲಿ ತುರ್ತು ಅನುಮೋದನೆ ನೀಡಲಾಗಿದೆ. ಹೀಗಾಗಿ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗುವ ಅವಶ್ಯಕತೆ ಇರೋದಿಲ್ಲ. ಆದರೆ ಕೋವಿಡ್ ಲಕ್ಷಣಗಳನ್ನು ಹೊಂದಿದ್ದಲ್ಲಿ ಮಾತ್ರ ಕ್ವಾರಂಟೈನ್ ಅನಿವಾರ್ಯವಾಗಿರಲಿದೆ.
ನೇಪಾಳ : ಕೋವ್ಯಾಕ್ಸಿನ್ ಲಸಿಕೆ ಪಡೆದ ಭಾರತೀಯರು ನೇಪಾಳಕ್ಕೆ ಪ್ರಯಾಣ ಬೆಳೆಸಬಹುದು. ಆದರೆ ಎರಡನೇ ಡೋಸ್ ಪಡೆದು 14 ದಿನಗಳ ಅವಧಿಯನ್ನು ಪೂರೈಸುವುದು ಮಾತ್ರ ಕಡ್ಡಾಯವಾಗಿರಲಿದೆ. ಹಾಗೂ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಅನಿವಾರ್ಯವಾಗಿದೆ.
ಜಿಂಬಾಬ್ವೆ : ಜಿಂಬಾಬ್ವೆ ಕೂಡ ಭಾರತ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದೆ. ಕೊರೊನಾ ನೆಗೆಟಿವ್ ವರದಿ ಸಮೇತ ಜಿಂಬಾಬ್ವೆಗೆ ಪ್ರಯಾಣ ಬೆಳೆಸುವವರು 10 ದಿನಗಳ ಕ್ವಾರಂಟೈನ್ಗೆ ಒಳಗಾಗುವುದು ಅನಿವಾರ್ಯವಾಗಲಿದೆ. ನೆಗೆಟಿವ್ ವರದಿಯನ್ನು ಹೊಂದಿಲ್ಲದವರಿಗೆ ಜಿಂಬಾಬ್ವೆ ಎಂಟ್ರಿಗೆ ನಿರ್ಬಂಧ ಇರಲಿದೆ.