ನೆರೆಮನೆಯವರು ಬೀದಿ ನಾಯಿಗಳ ಮೇಲೆ ತೋರುತ್ತಿದ್ದ ಅಟ್ಟಹಾಸವನ್ನು ಸಹಿಸಲಾಗದ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೆರೆ ಮನೆಯವರ ಈ ಕೆಟ್ಟ ಬುದ್ಧಿಯಿಂದ ನೊಂದಿದ್ದ ದಂಪತಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆರೋಪಿಗಳು ಬೀದಿ ನಾಯಿಗಳ ಮೇಲೆ ಕಲ್ಲು ಎಸೆದಿದ್ದಾರೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಮಲ್ಲೇಶ್ವರಂ ನಿವಾಸಿಗಳಾದ ದಂಪತಿ ನೀಡಿರುವ ಮಾಹಿತಿಯ ಪ್ರಕಾರ ನಾಯಿಯು ಇತ್ತೀಚೆಗಷ್ಟೇ ಕ್ಯಾನೈನ್ ಡಿಸ್ಟೆಂಪರ್ ಕಾಯಿಲೆಯಿಂದ ಗುಣಮುಖವಾಗಿದೆ. ಹಾಗೂ ಆ ಶ್ವಾನಕ್ಕೆ ಬಾಯಿ ತೆರೆಯಲು ಆಗುವುದಿಲ್ಲ ಎಂದು ತಿಳಿದುಬಂದಿದೆ.
ಅನುರಾಧಾ ಹಾಗೂ ಶ್ರೀನಿವಾಸ್ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದವರಾಗಿದ್ದಾರೆ. ನಿವೃತ್ತ ಎಂಎನ್ಸಿ ಉದ್ಯೋಗಿಯಾಗಿರುವ ಶ್ರೀನಿವಾಸ್ ತಮ್ಮ ಪತ್ನಿಯ ಸಹಾಯದಿಂದ ಮಲ್ಲೇಶ್ವರಂ 13ನೇ ಕ್ರಾಸ್ನಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೆರೆಹೊರೆಯವರು ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ, ಅವು ನಮ್ಮ ಮೇಲೆ ದಾಳಿ ಮಾಡಬಹುದು ಎಂಬ ವದಂತಿ ಹಬ್ಬಿಸಿದ್ದರು.
ಆದರೆ ದಂಪತಿ ಹೇಳುವಂತೆ ಈ ಶ್ವಾನವು ಆಕ್ರಮಣ ಮಾಡುವ ಸ್ಥಿತಿಯಲ್ಲಿಯೇ ಇಲ್ಲ. ಮೂರು ವರ್ಷದ ಹಿಂದಿನಿಂದಲೇ ಶ್ವಾನವು ಏರಿಯಾದಲ್ಲಿ ವಾಸವಿದೆ. ಆದರೆ ನೆರೆಹೊರೆಯವರು ಶ್ವಾನಕ್ಕೆ ಕಲ್ಲು ಎಸೆಯುತ್ತಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ದೂರು ನೀಡುವ ವೇಳೆಯಲ್ಲಿ ಪೊಲೀಸರು ಸಹ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ ಎಂದಿದ್ದಾರೆ.