ಕೊರೊನಾ ವೈರಸ್ ವಿಶ್ವವನ್ನು ಬಿಟ್ಟು ಹೋಗಿಲ್ಲ. ವಿಶ್ವದಾದ್ಯಂತ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೊರೊನಾ ಮೂರನೇ ಅಲೆ ಜುಲೈ 4ರಿಂದಲೇ ಶುರುವಾಗಿದೆ ಎಂಬ ವರದಿ ಬಂದಿದೆ. ಕೊರೊನಾ ಮೊದಲ ಮತ್ತು ಎರಡನೇ ಅಲೆ ಎಷ್ಟು ಅಪಾಯಕಾರಿಯಾಗಿತ್ತೆಂಬುದು ಎಲ್ಲರಿಗೂ ತಿಳಿದಿದೆ.
ಮೂರನೇ ಅಲೆ ಬಗ್ಗೆ ಈಗಾಗಲೇ ತಜ್ಞರು ಎಚ್ಚರಿಕೆ ನೀಡಿರುವ ಕಾರಣ ನಿರ್ಲಕ್ಷ್ಯ ಸಲ್ಲದು. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಓಡಾಡಿದ್ರೆ ಅಪಾಯ ಕಟ್ಟಿಟ್ಟಬುಟ್ಟಿ.
ಕೊರೊನಾ ಬರದಂತೆ ತಡೆಯಲು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಕಡಿಮೆಯಾಗ್ತಿದ್ದಂತೆ ಅನೇಕರು ಮಾಸ್ಕ್ ಮರೆತಿದ್ದಾರೆ. ಮಾಸ್ಕ್ ಗಡ್ಡದ ಕೆಳಗಿಳಿಯುತ್ತಿದೆ. ಇದು ಅಪಾಯದ ಮುನ್ಸೂಚನೆ. ಮಾಸ್ಕ್ ಬಳಕೆಯನ್ನು ಕಡ್ಡಾಯವಾಗಿ ಮಾಡಿ. ಸರ್ಜಿಕಲ್, ಬಟ್ಟೆ ಅಥವಾ ಎನ್ 95 ಮಾಸ್ಕ್ ಇದರಲ್ಲಿ ಒಂದನ್ನು ಬಳಸಿ. ಹಾಗೆ ಆಗಾಗ ಮಾಸ್ಕ್ ಬದಲಿಸುತ್ತಿರಿ.
ಕೊರೊನಾ ಲಾಕ್ ಡೌನ್ ಮುಗಿಯುತ್ತಿದ್ದಂತೆ ಜನರು ಮನೆಯಿಂದ ಹೊರ ಬಿದ್ದಿದ್ದಾರೆ. ಮಾಲ್, ಮಾರುಕಟ್ಟೆಗಳಲ್ಲಿ ಜನದಟ್ಟಣೆ ಹೆಚ್ಚಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೊರೊನಾ ಬಂದ್ಮೇಲೆ ತೊಂದರೆ ಪಡುವ ಬದಲು ಈಗ್ಲೇ ಎಚ್ಚರಿಕೆ ವಹಿಸಿ.
ಲಾಕ್ ಡೌನ್ ಮುಗಿಯುತ್ತಿದ್ದಂತೆ ಜನರು ಸುತ್ತಾಟ ಶುರು ಮಾಡಿದ್ದಾರೆ. ಸದ್ಯ ಅದ್ರ ಅಗತ್ಯವಿಲ್ಲ. ಸುತ್ತಾಟವನ್ನು ಮುಂದಿನ ದಿನಗಳಲ್ಲಿ ಮಾಡಬಹುದು. ಅವಶ್ಯಕತೆಯಿದ್ರೆ ಮಾತ್ರ ಮನೆಯಿಂದ ಹೊರ ಬನ್ನಿ.
ಕೊರೊನಾ ಹೆಚ್ಚಿರುವಾಗ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸ್ಯಾನಿಟೈಜರ್ ಬಳಕೆ ಮಾಡ್ತಿದ್ದರು. ಹಾಗೆ ಸೋಪ್ ನಿಂದ ಆಗಾಗ ಕೈ ತೊಳೆಯುತ್ತಿದ್ದರು. ಈಗ ಎಲ್ಲವನ್ನೂ ಜನರು ಮರೆತಿದ್ದಾರೆ. ಈ ತಪ್ಪು ಮಾಡಬೇಡಿ. ಆಗಾಗ ಕೈ ಸ್ವಚ್ಛಗೊಳಿಸಿ. ಹೊರಗಡೆಯಿಂದ ಮನೆಗೆ ಬಂದಾಗ ಸ್ನಾನ ಮಾಡಿ.
ಕೊರೊನಾ ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ. ಪ್ರತಿಯೊಬ್ಬರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಅಗತ್ಯವಿದೆ. ಆದಷ್ಟು ಬೇಗ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ.