ಭಾರತದ ಮಾರುಕಟ್ಟೆಗೆ 5-ಬಾಗಿಲಿನ ಜಿಮ್ನಿ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸುಜ಼ುಕಿ ಮುಂದಾಗಿದೆ. ಈ ಬಗ್ಗೆ ಕೆಲವು ವರದಿಗಳು ಬಂದಿದ್ದು, 2020 ಆಟೋ ಎಕ್ಸ್ಪೋ ವೇಳೆ ಮೂರು ಬಾಗಿಲಿನ ಜಿಮ್ನಿ ಕಾರನ್ನು ಕಂಪನಿ ಪ್ರದರ್ಶಿಸಿತ್ತು. ಆದರೆ ಈ ಕಾರಿನ ಬೆಲೆಯ ಕಾರಣದಿಂದಾಗಿ ಭಾರತದಲ್ಲಿ ಬಿಡುಗಡೆ ಮಾಡದಿರಲು ಮಾರುತಿ ಸುಜ಼ುಕಿ ನಿರ್ಧರಿಸಿತ್ತು.
ಇದಾದ ಬಳಿಕ ಐದು ಬಾಗಿಲಿನ ಜಿಮ್ನಿ ಅಭಿವೃದ್ಧಿಪಡಿಸುತ್ತಿರುವ ವಿಚಾರ ಬಹಿರಂಗಗೊಳಿಸಿದ್ದ ಮಾರುತಿ ಸುಜ಼ುಕಿ, ಭಾರತದ ಎಸ್‌ಯುವಿ ಪ್ರಿಯರಿಗೊಂದು ಇಂಟರೆಸ್ಟಿಂಗ್ ಸುದ್ದಿ ಕೊಟ್ಟಿತ್ತು. ಈ ಎಸ್‌ಯುವಿಯ ಬಿಡುಗಡೆ ಕುರಿತಂತೆ ಹೆಚ್ಚಿನ ಮಾಹಿತಿಗಳು ಇನ್ನೂ ಸಿಕ್ಕಿಲ್ಲ.
ಜಿಮ್ನಿ 5-ಡೋರ್ ನಾಲ್ಕು ಮೀಟರ್ ಉದ್ದವಿರಲಿದ್ದು, ಜಿಮ್ನಿ 3-ಡೋರ್‌ಗಿಂತ 300 ಮಿಮೀ ಉದ್ದವಿದೆ. ಜಿಮ್ನಿ 5-ಡೋರ್‌ನ ಉದ್ದ ವಿಟಾರಾ ಬ್ರೀಜ಼ಾಗಿಂತ ಸ್ವಲ್ಪ ಚಿಕ್ಕದಿದೆ.
ಜಿಮ್ನಿ 5-ಡೋರ್‌ಗೆ 1.5-ಲೀಟರ್ ಕೆ15ಬಿ ಪೆಟ್ರೋಲ್ ಇಂಜಿನ್‌ನ ಬಲವಿದ್ದು, ಎಸ್‌ಎಚ್‌ವಿಎಸ್ ವ್ಯವಸ್ಥೆ ಸಹ ಇದೆ. ಈ ಇಂಜಿನ್ 102ಬಿಎಚ್‌ಪಿ ಶಕ್ತಿ ಉತ್ಪಾದಿಸಲಿದ್ದು, 138ಎನ್‌ಎಂನಷ್ಟು ಟಾರ್ಕ್ ಶಕ್ತಿ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಟಾರ್ಕ್ ಪರಿವರ್ತಿತ ಸ್ವಯಂಚಾಲಿತ ಗೇರ್‌ಬಾಕ್ಸ್ ವರ್ಶನ್‌ಗಳಲ್ಲಿ ಜಿಮ್ನಿ 5-ಡೋರ್ ಕಾರು ಬರಲಿದೆ.
ಜಿಮ್ನಿ ಕಾರುಗಳನ್ನು ಭಾರತದಲ್ಲೇ ಉತ್ಪಾದಿಸುವ ಮಾರುತಿ ಸುಜ಼ುಕಿ, ರಫ್ತಿನ ದೃಷ್ಟಿಯಿಂದ ಎಡಬದಿ ಹಾಗೂ ಬಲಬದಿಗಳೆರಡೂ ಆಯ್ಕೆಯಲ್ಲಿ ಡ್ರೈವಿಂಗ್ ವ್ಯವಸ್ಥೆ ನೀಡುತ್ತಿದೆ. ಮಹಿಂದ್ರಾದ ಥಾರ್ ಹಾಗೂ ಫೋರ್ಸ್‌ನ ಗೂರ್ಖಾಗಳೊಂದಿಗೆ ಪೈಪೋಟಿದಾರನಾದ ಜಿಮ್ನಿಯ ಬೆಲೆ 10 ಲಕ್ಷ ರೂ.ಗಳ ಮೇಲ್ಪಟ್ಟಿರಲಿದೆ.