alex Certify ಉತ್ತರ ಕರ್ನಾಟಕಕ್ಕೆ ಸಿಎಂ ʻಬಂಪರ್ʼ ಗಿಫ್ಟ್ : ಸಮಗ್ರ ಅಭಿವೃದ್ಧಿಗೆ ʻ8 ಯೋಜನೆʼಗಳ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಕರ್ನಾಟಕಕ್ಕೆ ಸಿಎಂ ʻಬಂಪರ್ʼ ಗಿಫ್ಟ್ : ಸಮಗ್ರ ಅಭಿವೃದ್ಧಿಗೆ ʻ8 ಯೋಜನೆʼಗಳ ಘೋಷಣೆ

ಬೆಳಗಾವಿ : ಬೆಳಗಾವಿಯಲಿ ನಡೆದ ವಿಧಾನಮಂಡಲದ  ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಉತ್ತರ ಕರ್ನಾಟಕಕ್ಕೆ ಭರ್ಜರಿ ಕೊಡುಗೆ ನೀಡಿದ್ದು, ನಂಜುಂಡಪ್ಪ ವರದಿ ಅನುಷ್ಠಾನ ಸಂಬಂಧ ಉನ್ನತಾಧಿಕಾರ ಸಮಿತಿ ರಚನೆ, ಕೈಗಾರಿಕೆ ಸ್ಥಾಪನೆಗೆ ಒತ್ತು, ಸಹಕಾರಿ ಬ್ಯಾಂಕ್‌ ಗಳಲ್ಲಿನ ಬಡ್ಡಿ ಮನ್ನಾ ಸೇರಿದಂತೆ ಒಟ್ಟು ಎಂಟು ಘೋಷಣೆಗಳನ್ನು ಮಾಡಿದ್ದಾರೆ.

ಬೆಳಗಾವಿ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಸಂಬಂಧಿಸಿದಂತೆ ಸದನಕ್ಕೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಎಂಟು ಘೋಷಣೆಗಳನ್ನು ಮಾಡಿದ್ದಾರೆ.

ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆ ಸಲ್ಲದು ಹಾಗೂ ಅದು ತಾರತಮ್ಯ ನಿವಾರಣೆಗೆ ಪರಿಹಾರವೂ ಅಲ್ಲ. ಪ್ರತ್ಯೇಕ ಕರ್ನಾಟಕಕ್ಕೆ ಒತ್ತಾಯ ಮಾಡುವುದು ಏಕೀಕರಣಕ್ಕೆ ಹೋರಾಡಿ, ಪ್ರಾಣ ತ್ಯಾಗ ಮಾಡಿದವರಿಗೆ ನಾವು ಮಾಡುವ ಅವಮಾನವಾಗಿದೆ ಎಂದರು.

ಏಕೀಕರಣಕ್ಕಾಗಿ ಬಹಳ ಜನ ಗಣ್ಯರು ಹೋರಾಡಿದರು. ಭಾಷಾವಾರು ಪ್ರಾಂತ್ರ್ಯ ರಚನೆಯಾಗುವಾಗಲು ಹೋರಾಟ ಮಾಡಿದವರಿದ್ದಾರೆ. ಹೈದರಾಬಾದ್ ಕರ್ನಾಟಕಕ್ಕೆ 371 ಗೆ ತಿದ್ದುಪಡಿ ಆಗಿ 371 ಜೆ ಪರಿಚ್ಛೇದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ,  ಧರ್ಮಸಿಂಗ್,  ವೈಜನಾಥ್ ಪಾಟೀಲ್ ಮುಂತಾದವರು ಹೋರಾಡಿದರು. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2014 ಮತ್ತು 2017 ರಲ್ಲಿ ಉತ್ತರ ಕರ್ನಾಟಕದದ ಬಗ್ಗೆ ಚರ್ಚೆಯಾಗಿತ್ತು. ಒಮ್ಮೆ ಈ ಬಗ್ಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಉತ್ತರ ನೀಡಿದ್ದೆ ಎಂದು ಹೇಳಿದ್ದಾರೆ.

ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಪೂರ್ತಿ ಖರ್ಚಾಗಿ ಅಭಿವೃದ್ಧಿಯಾಗಬೇಕು. ಕಿತ್ತೂರು ಕರ್ನಾಟಕದ 5 ತಾಲ್ಲೂಕುಗಳು ಸೇರಿದಂತೆ ಹಿಂದುಳಿದ, ಅತೀ ಹಿಂದುಳಿದ ತಾಲ್ಲೂಕುಗಳಿಗೂ ಅನುದಾನ ಕೊಡಲಾಗುವುದು. ಕಲ್ಯಾಣ ಕರ್ನಾಟಕಕ್ಕೆ 2013-14 ರಿಂದ ಈವರೆಗೆ 14,877.36 ಕೋಟಿ ರೂ.ಗಳು ಮೀಸಲಿಡಲಾಗಿದೆ. ಬಿಡುಗಡೆಯಾಗಿದ್ದು 10,280 ಕೋಟಿ ರೂ. ಹಾಗೂ 8,330 ಕೋಟಿ ರೂ. ವೆಚ್ಚವಾಗಿದೆ.  ಮುಂದಿನ ವರ್ಷದಿಂದ 5,000 ಕೋಟಿ ರೂ.ಗಳನ್ನು ಕಲ್ಯಾಣ ಕರ್ನಾಟಕಕ್ಕೆ  ನೀಡಲಾಗುವುದು. ಮುಂಬೈ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳಿಗೂ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟದ ಸಮಗ್ರ ಅಭಿವೃದ್ಧಿಗೆ 8 ಸೂತ್ರಗಳ ಘೋಷಣೆ

1.ನಂಜುಂಡಪ್ಪನವರ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಲು ನುರಿತ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಹೈಪವರ್ [ಉನ್ನತಾಧಿಕಾರ ಸಮಿತಿ] ಕಮಿಟಿ ರಚನೆ.

2 ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ.

3 ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಸಲುವಾಗಿ ಬೆಳಗಾವಿ ಸಮೀಪ ಸುಮಾರು 2000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ, 500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್ ಅನ್ನು ಸ್ಥಾಪಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಏರೋಸ್ಪೇಸ್ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು.

4 ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್‌ಅನ್ನು ಸ್ಥಾಪಿಸಲಾಗುತ್ತಿದ್ದು, ಈಗಾಗಲೇ 19 ಘಟಕಗಳು ರೂ.1255 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಸುಮಾರು 2450 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಅಲ್ಲದೇ, ಧಾರವಾಡದ ಸಮೀಪ ಸುಮಾರು 3000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಸ್ಥಾಪನೆ.

5 ರಾಯಚೂರಿನಲ್ಲಿ ಹತ್ತಿ ಉತ್ಪಾದನೆಯು ಹೆಚ್ಚಿರುವುದರಿಂದ ಈ ಜಿಲ್ಲೆಯಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಠಿಯಿಂದ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು.

6 ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್‌ಅನ್ನು ಅಂದಾಜು 1500 ಎಕರೆ ಪ್ರದೇಶದಲ್ಲಿ ಸ್ಥಾಪನೆ.

7 ಉತ್ತರ ಕರ್ನಾಟಕವು ಸಮೃದ್ಧ ಪ್ರವಾಸೋದ್ಯಮಗಳ ತಾಣವಾಗಿದೆ. ಐತಿಹಾಸಿಕ ಮಹತ್ವವಿರುವ ಈ ತಾಣಗಳು ಅಂತರರಾಷ್ಟ್ರೀಯವಾಗಿಯೂ ಮಹತ್ವ ಪಡೆದಿವೆ. ಆದರೆ ಇದಕ್ಕೆ ಸಾಕಷ್ಟು ಮಹತ್ವ ನೀಡದೆ ಹಿನ್ನಡೆಯನ್ನು ಅನುಭವಿಸುತ್ತಿದೆ. ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಮ.

8 ಧಾರವಾಡದಲ್ಲಿರುವ ವಾಲ್ಮಿ [ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ] ಯನ್ನು ಉನ್ನತೀಕರಿಸಲಾಗುವುದು. ಇದನ್ನು ‘Centre of excellence for water management’ ಆಗಿ ಬದಲಾಯಿಸಿ ಇದರ ಮೂಲಕ ಜಲ ಶಿಕ್ಷಣ ನೀಡುವುದಷ್ಟೆ ಅಲ್ಲ, ಉತ್ತರ ಕರ್ನಾಟಕದ ಮಣ್ಣಿನ ಸವುಳು- ಜವುಳು ಸಮಸ್ಯೆಯನ್ನು ನಿರ್ವಹಿಸಲಾಗುವುದು. ಹಾಗೂ ರೈತರ ಆದಾಯ ಹೆಚ್ಚಳದ ಕಡೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...