alex Certify ನಾಳೆ ಬೆಳಗ್ಗೆ 11 ಗಂಟೆಗೆ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ, ಸರ್ಕಾರಕ್ಕೆ BSY ಮಾರ್ಗದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಬೆಳಗ್ಗೆ 11 ಗಂಟೆಗೆ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ, ಸರ್ಕಾರಕ್ಕೆ BSY ಮಾರ್ಗದರ್ಶನ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ, ರಾಜನಾಥ್ ಸಿಂಗ್, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಆಡಳಿತ ನಡೆಸುತ್ತೇನೆ ಎಂದು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನನ್ನ ರಾಜಕೀಯ ಬೆಳವಣಿಗೆಗೆ ಕಾರಣೀಭೂತರು, ರಾಜಕೀಯ ಗುರುಗಳಾದ ಯಡಿಯೂರಪ್ಪನವರ ಆಶೀರ್ವಾದದಿಂದ, ಪಕ್ಷದ ಶಾಸಕರು, ನಾಯಕರ ಸಹಕಾರದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದೇನೆ. ಯಡಿಯೂರಪ್ಪನವರು 40 ವರ್ಷ ಹಗಲಿರುಳು ಶ್ರಮಿಸಿ ಬಿಜೆಪಿ ಸಂಘಟನೆ ಮಾಡಿ ಈ ಮಟ್ಟಕ್ಕೆ ತಂದಿದ್ದಾರೆ. ಪಕ್ಷಕ್ಕೆ ತನ್ನದೇ ಆದ ಪರಂಪರೆ, ಮೌಲ್ಯಗಳಿವೆ. ಎರಡು ವರ್ಷ ಕಷ್ಟ ಪರಿಸ್ಥಿತಿ ಇತ್ತು. ಎರಡು ಬಾರಿ ಕೋವಿಡ್ ಮತ್ತು ಎರಡು ಬಾರಿ ಪ್ರವಾಹ ಪರಿಸ್ಥಿತಿಯ ನಡುವೆಯೂ ಯಡಿಯೂರಪ್ಪ ರಾಜ್ಯವನ್ನು ಮುನ್ನಡೆಸಿದ್ದಾರೆ. ಹಣಕಾಸು ಕೊರತೆಯಾಗದಂತೆ ಉತ್ತಮ ನಿರ್ವಹಣೆ ಮಾಡಿದ್ದಾರೆ. ಯಡಿಯೂರಪ್ಪನವರ ತ್ಯಾಗಮಯ ನಿರ್ಣಯ ಇದ್ದು, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬಡವರು, ದಲಿತರು, ಹಿಂದುಳಿದ ವರ್ಗದವರು ಎಲ್ಲ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ. ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಬಡ ಜನರ ಪರವಾದ, ಎಲ್ಲರಿಗೂ ನ್ಯಾಯಸಮ್ಮತವಾದ ಆಡಳಿತವನ್ನು ಕೊಡಬೇಕೆನ್ನುವ ಸಂಕಲ್ಪವನ್ನು ಮಾಡಿದ್ದೇನೆ ಎಂದರು.

ಪ್ರತಿಯೊಂದು ವಿಚಾರದಲ್ಲಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ರಾಜ್ಯಪಾಲರಿಗೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಸರ್ಕಾರ ರಚನೆ ಮಾಡಲು ಆಮಂತ್ರಣ ಕೊಟ್ಟಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಕೇಂದ್ರ ಮತ್ತು ರಾಜ್ಯ ನಾಯಕರು ನಾಯಕತ್ವದಲ್ಲಿ ಹೊಸ ಸರ್ಕಾರ ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನೀಡಲಿದೆ. ನಾಳೆ ನಾನು ಒಬ್ಬನೇ ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದರು.

ಕೇಂದ್ರ ಸಚಿವರು, ವೀಕ್ಷಕರು, ಉಸ್ತುವಾರಿಗಳು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಹೃದಯಪೂರ್ವಕವಾಗಿ ಧನ್ಯವಾದಗಳು. ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಹಕಾರಕ್ಕೆ ಧನ್ಯವಾದಗಳು. ಎಲ್ಲರಿಗೂ ಧನ್ಯವಾದಗಳು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...