alex Certify ರೈತರಿಗೆ ಸಿಎಂ ಗುಡ್ ನ್ಯೂಸ್: ರಾಜ್ಯದಲ್ಲಿ ಪುಣ್ಯಕೋಟಿ ದತ್ತು ಯೋಜನೆ ಪ್ರಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಸಿಎಂ ಗುಡ್ ನ್ಯೂಸ್: ರಾಜ್ಯದಲ್ಲಿ ಪುಣ್ಯಕೋಟಿ ದತ್ತು ಯೋಜನೆ ಪ್ರಾರಂಭ

ಬೆಂಗಳೂರು: ರಾಜ್ಯದ ಗೋಶಾಲೆಗಳಲ್ಲಿನ ಗೋವುಗಳನ್ನು 11,000 ರೂ.ಗಳ ವಾರ್ಷಿಕ ಮೊತ್ತಕ್ಕೆ ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅವರು ಇಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕಿರುಚಿತ್ರ ಪ್ರದರ್ಶನ, ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಮಾತನಾಡಿದರು.

ಈ ಹಿಂದೆ ನಾನು‌ ನನ್ನ ಹುಟ್ಟುಹಬ್ಬವನ್ನು ಅನಾಥಾಶ್ರಮಕ್ಕೆ ತೆರಳಿ ಮಕ್ಕಳಿಗೆ ದಾನಧರ್ಮ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದ್ದೆ. ಈ ಬಾರಿ 11 ಗೋವುಗಳನ್ನು ದತ್ತು ತೆಗೆದುಕೊಂಡು ಆಚರಿಸಿಕೊಂಡಿರುವುದನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು.

ರಾಜ್ಯದಲ್ಲಿ ಗೋವುಗಳನ್ನು ಗೋಮಾತೆ ಎಂದು ಪೂಜಿಸುವ ಲಕ್ಷಗಟ್ಟಲೆ ಜನರಿದ್ದಾರೆ. ಗೋವುಗಳ ಸೇವೆ ಪುಣ್ಯದ ಕೆಲಸವೆನ್ನುವ ಭಾವನೆ ನಮ್ಮಲ್ಲಿದೆ. ಈ ಯೋಜನೆಯಿಂದ ಗೋಶಾಲೆ ಹಾಗೂ ಗೋವುಗಳ ನಿರ್ವಹಣೆ ಸಾಧ್ಯವಾಗಲಿದೆ. ವಯಸ್ಸಾದ ಗೋವುಗಳ ನಿರ್ವಹಣೆಗೆ ಪರಿಹಾರ ಒದಗಿಸುವ ಸಕಾರಾತ್ಮಕ ಚಿಂತನೆಯಿಂದ ಈ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಸಿಎಂ ಹೇಳಿದರು.

ಜೀವನಕ್ಕೆ ಆಧಾರವಾಗಿರುವ ಗೋವು ಸಾಕಾಣಿಕೆ:

ಕಾಮಧೇನು ಎಂದೇ ಕರೆಯಲ್ಪಡುವ ಗೋವುಗಳಿಲ್ಲದೆ ಮನುಷ್ಯನ ಬದುಕಿಲ್ಲ. ಗೋವು ಸಾಕಾಣಿಕೆಯಿಂದ ಹಾಲು, ಇತ್ಯಾದಿ ಉತ್ಪನ್ನಗಳಿಂದ ಜೀವನದ ಆಧಾರವಾಗಿಸಿಕೊಂಡಿದ್ದಾರೆ. ನಮ್ಮ ಸರ್ಕಾರ ಗೋಹತ್ಯೆ ಕಾನೂನನ್ನು ಜಾರಿಗೆ ತರುವಾಗ, ವಯಸ್ಸಾದ ಗೋವುಗಳ ಸಾಕಾಣಿಕೆಯಿಂದ ರೈತರಿಗೆ ಹೊರೆಯಾಗುತ್ತದೆ ಎನ್ನುತ್ತಿದ್ದರು. ರೈತ ಗೋವುಗಳನ್ನು ಹೊರೆ ಎಂದು ತಿಳಿದೇ ಇಲ್ಲ. ಗೋ ಸಂಪತ್ತನ್ನು ಉಳಿಸಿಕೊಂಡರೆ ಆಹಾರ, ಆದಾಯ, ಪೌಷ್ಟಿಕತೆಯನ್ನು ನೀಡುತ್ತದೆ. ಇಂತಹ ಗೋವುಗಳು ವಯಸ್ಸಾದ ನಂತರ ವಧೆ ಮಾಡುವ ಕೃತ್ಯಕ್ಕೆ ಕೆಲವರು ಪ್ರೋತ್ಸಾಹ ನೀಡುತ್ತಾರೆ. ನಮ್ಮ ದೇಶದ ಸಂಸ್ಕೃತಿ, ಜೀವ ಉಳಿಸುವುದೇ ಹೊರತು ವಧೆ ಮಾಡುವುದಲ್ಲ ಎಂದರು.

ಮನೆಬಾಗಿಲಿಗೆ ತೆರಳಿ ದನಕರುಗಳಿಗೆ ಚಿಕಿತ್ಸೆ :

ಗೋ ಸಂಪತ್ತಿನ ರಕ್ಷಣೆಗಾಗಿ 100 ಗೋಶಾಲೆಗಳ ಪ್ರಾರಂಭ, ಗೋ ಉತ್ಪನ್ನಗಳ ಮಾರಾಟಕ್ಕಾಗಿ ಗೋ ಮಾತಾ ಸಹಕಾರ ಸಂಘವನ್ನು ಸ್ಥಾಪಿಸಲಾಗುವುದು. ಔಷಧಿ ವ್ಯವಸ್ಥೆ, 400 ಪಶುವೈದ್ಯರ ನೇಮಕಾತಿ, ಡಿಪ್ಲೊಮಾ ಮಾಡಿದ ವಿದ್ಯಾರ್ಥಿಗಳಿಗಾಗಿ 250 ಹುದ್ದೆ ಭರ್ತಿಗೊಳಿಸಿ ಗೋಸೇವೆ, ಪಶುಸೇವೆಗೆ ಅವಕಾಶ ಕಲ್ಪಿಸಲಾಗುವುದು. ರೋಗಗ್ರಸ್ತ ದನಕರುಗಳ ಚಿಕಿತ್ಸೆಗೆ ಅನುಕೂಲವಾಗುವಂತಹ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗಿದ್ದು, ದನಕರುಗಳಿಗೆ ಮನೆಬಾಗಿಲಿಗೆ ತೆರಳಿ ಚಿಕಿತ್ಸೆ ಕೊಡಿಸುವಂತಹ ಮಾನವೀಯ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಪ್ರಾರಂಭಿಸಿರುವುದು ಅಭಿನಂದನೀಯ ಎಂದರು.

ರಾಜ್ಯದಲ್ಲಿ ಕ್ಷೀರ ಆರ್ಥಿಕ ಕ್ರಾಂತಿ :

ನಂದಿನ ಕ್ಷೀರ ಅಭಿವೃದ್ಧಿ ಸಹಕಾರಿ ಬ್ಯಾಂಕನ್ನು ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಲಾಗುತ್ತಿದೆ. 3600 ಕೋಟಿ ರೂ.ಗಳ ಬಂಡವಾಳದಿಂದ ಹಾಲು ಉತ್ಪಾದಿಸುವ ರೈತರಿಗೆ ಸುಲಭ ದರದಲ್ಲಿ ಸಾಲ ನೀಡುವ ಮೂಲಕ ಆರ್ಥಿಕ ಅಭಿವೃದ್ದಿಗೊಳಿಸಲಾಗುವುದು. ರಾಜ್ಯದಲ್ಲಿ ಕ್ಷೀರ ಆರ್ಥಿಕ ಕ್ರಾಂತಿ ಆಗಲಿದೆ. ಗೋವುಗಳ ವಿವಿಧ ತಳಿಗಳ ಅಭಿವೃದ್ಧಿ, ಹಾಲು ಮೆಗಾ ಡೈರಿ ಸ್ಥಾಪನೆಗೆ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಸೆಕೆಂಡರಿ ಕೃಷಿ ನಿರ್ದೇಶನಾಲಯ ಮಾಡಿ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಮಾರುಕಟ್ಟೆ ಕಲ್ಪಿಸುವ ಉದ್ದೇಶಿಂದ ಸ್ಥಾಪಿಸಲಾಗಿದೆ. ರೈತರ, ಶ್ರಮಿಕರ ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಲು ಸರ್ಕಾರ ಬದ್ಧವಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಸಹಕಾರ, ಪಶುಸಂಗೋಪನೆ ಇಲಾಖೆಗಳನ್ನು ಸಂಯೋಜನೆಗೊಳಿಸುವ ಮೂಲಕ ಮಹಾತ್ಮಾಗಾಂಧಿಯವರ ಗ್ರಾಮಾಭಿವೃದ್ಧಿಯ ಕನಸನ್ನು ಸಾಕಾರಗೊಳಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಪ್ರೇರಣಾಶಕ್ತಿಯಾಗಿರುವ ಗೋಮಾತೆಯ ಆರೋಗ್ಯ ರಕ್ಷಣೆ ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...