
ಹಿಂದೆಲ್ಲ ಹಳ್ಳಿಗಳಲ್ಲಿ ಊರ ನಾಗರಿಕರೆಲ್ಲ ಸೇರಿಕೊಂಡು ಕಟ್ಟೆ ಪಂಚಾಯ್ತಿಯನ್ನ ಮಾಡುತ್ತಿದ್ದರು. ಯಾವುದೋ ಒಂದು ವಿಷಯವನ್ನ ಹಿಡಿದುಕೊಂಡು ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಹೊರಹಾಕುತ್ತಾ ಟೈಮ್ ಪಾಸ್ ಮಾಡ್ತಾ ಇದ್ದರು. ಇದೀಗ ಇಂತಹದ್ದೇ ಮಾದರಿಯಲ್ಲಿ ಕೆಲಸ ಮಾಡುತ್ತಿರುವ ಅಪ್ಲಿಕೇಶನ್ ಒಂದು 1 ಮಿಲಿಯನ್ ಡೌನ್ಲೋಡ್ ಕಾಣುವ ಮೂಲಕ ಭಾರೀ ಸುದ್ದಿಯಲ್ಲಿದೆ.
ಅಂದಹಾಗೆ ನಾವು ಹೇಳೋಕೆ ಹೊರಟಿರುವ ಈ ಅಪ್ಲಿಕೇಶನ್ನ ಹೆಸರು ಕ್ಲಬ್ ಹೌಸ್..! ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕ್ಲಬ್ಹೌಸ್ನದ್ದೇ ಹವಾ ಎಂಬಂತಾಗಿದೆ. ಇಲ್ಲಿಯವರೆಗೆ ನಿಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನ ಪೋಸ್ಟ್ ಮಾಡಿ ನಿಮ್ಮ ಭಾವನೆಗಳನ್ನ ಶೀರ್ಷಿಕೆ ಅಂದರೆ ಕ್ಯಾಪ್ಶನ್ ಮೂಲಕ ಹೊರಹಾಕಲು ಅವಕಾಶವಿತ್ತು. ಆದರೆ ಈ ಕ್ಲಬ್ ಹೌಸ್ನಲ್ಲಿ ನೀವು ಆಡಿಯೋ ಸಂಭಾಷಣೆ ಮೂಲಕವೇ ಸಾರ್ವಜನಿಕರ ಜೊತೆ ಮಾತನಾಡಬಹುದಾಗಿದೆ. ಒಂದು ರೀತಿಯಲ್ಲಿ ಇದು ಟೆಲಿಫೋನ್ ಸಂಭಾಷಣೆಯಂತೆಯೇ ಇರಲಿದೆ.
ಇದೊಂದು ಇನ್ವೈಟ್ ಓನ್ಲಿ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಆಗಿರೋದ್ರಿಂದ ನೀವು ಈ ಅಪ್ಲಿಕೇಶನ್ ಬಳಕೆ ಮಾಡಬೇಕು ಅಂದಾದಲ್ಲಿ ನಿಮ್ಮನ್ನ ಇನ್ನೊಬ್ಬರು ಇನ್ವೈಟ್ ಮಾಡಬೇಕು. ಈ ಕ್ಲಬ್ ಹೌಸ್ನಲ್ಲಿ ನಿಮ್ಮದೇ ಆದ ಒಂದು ರೂಂ ರಚನೆ ಮಾಡಬಹುದು. ಯಾವುದೇ ವಿಚಾರಗಳ ಬಗ್ಗೆ ನೀವು ಆಡಿಯೋ ನೋಟ್ಗಳನ್ನ ಹರಿಬಿಡಬಹುದು. ನಿಮಗಿಷ್ಟ ಬಂದಾಗ ನೀವು ಈ ರೂಮಿನಲ್ಲಿ ಇರಬಹುದು. ಅಥವಾ ಹೊರಗೆ ಹೋಗಲೂಬಹುದು.
ಒಂದು ವಿಚಾರದ ಬಗ್ಗೆ ಚರ್ಚೆ ಮುಗಿಯುತ್ತಿದ್ದಂತೆ ಹೇಗೆ ನೀವು ಕರೆಯನ್ನ ಕಟ್ ಮಾಡುತ್ತಿದ್ದಿರೋ ಅದೇ ರೀತಿ ಈ ರೂಂ ಕೂಡ ಕ್ಲೋಸ್ ಆಗಲಿದೆ. ಒಮ್ಮೆ ನೀವು ಆಡಿಯೋ ಚಾಟ್ಗಳನ್ನ ಕೇಳಿದ ಬಳಕೆ ಅದು ಅಲ್ಲಿಂದ ಅಳಸಿ ಹೋಗೋದ್ರಿಂದ ನಿಮಗೆ ಇನ್ನೊಮ್ಮೆ ಆಡಿಯೋವನ್ನ ಕೇಳಲು ಸಾಧ್ಯವಿಲ್ಲ. ಹಾಗೂ ಕ್ಲಬ್ ಹೌಸ್ ಆಡಿಯೋವನ್ನ ರೆಕಾರ್ಡ್ ಮಾಡುವಂತಹ ಅಪ್ಲಿಕೇಶನ್ ಇಲ್ಲಿಯವರೆಗೆ ಅಭಿವೃದ್ಧಿ ಆಗಿಲ್ಲ. ಏಕಾಂಗಿತನವನ್ನ ಅನುಭವಿಸ್ತಾ ಇರುವವರು ಇಲ್ಲಿ ಹೊಸ ಜನರನ್ನ ಭೇಟಿಯಾಗಬಹುದು. ಯಾವುದೇ ವಿಷಯಗಳ ಬಗ್ಗೆ ನಿಮ್ಮದೇ ಧ್ವನಿಯಲ್ಲಿ ಅಭಿಪ್ರಾಯವನ್ನ ಹೊರಹಾಕಬಹುದು.
ಇದು ಸಂಪೂರ್ಣ ಆಡಿಯೋ ಬೇಸ್ಡ್ ಅಪ್ಲಿಕೇಶನ್ ಆಗಿರೋದ್ರಿಂದ ನೀವು ಯಾವುದೇ ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡುವ ಅವಕಾಶ ಇರೋದಿಲ್ಲ. ಥೇಟ್ ಪಂಚಾಯ್ತಿ ಕಟ್ಟೆಯ ಮಾತುಕತೆಯಂತೆಯೇ ನಿಮ್ಮ ಅಭಿಪ್ರಾಯವನ್ನ ಆಡಿಯೋದ ಮೂಲಕ ಹೊರಹಾಕಲು ಮಾತ್ರ ಅವಕಾಶ ಇರುತ್ತದೆ. ಎಲ್ಲಾ ಐಓಎಸ್ ಹಾಗೂ ಆಂಡ್ರಾಯ್ಡ್ ಫೋನ್ಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.
ಈ ಕ್ಲಬ್ ಹೌಸ್ ಇನ್ವೈಸ್ ಓನ್ಲಿ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಆಗಿದ್ದರೂ ಸಹ ಈಗಾಗಲೇ ಸಾಕಷ್ಟು ನಕಲಿ ಪ್ರೊಫೈಲ್ಗಳು ಈ ಕ್ಲಬ್ಹೌಸ್ನಲ್ಲಿ ಇದೆ. ಯುವಜನತೆ ಈ ಅಪ್ಲಿಕೇಶನ್ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನಿಮ್ಮದೇ ಧ್ವನಿಯಲ್ಲಿ ನಿಮ್ಮ ಜೀವನದ ವೈಯಕ್ತಿಕ ಮಾಹಿತಿಗಳನ್ನ ಇಲ್ಲಿ ಹಂಚಿಕೊಂಡಲ್ಲಿ ಮುಂದೊಂದು ದಿನ ನಿಮ್ಮನ್ನೇ ಬ್ಲಾಕ್ ಮೇಲ್ ಮಾಡಲು ಸೈಬರ್ ಕಳ್ಳರು ಇದನ್ನ ಬಳಕೆ ಮಾಡುವ ಸಾಧ್ಯತೆ ಕೂಡಾ ಇರುತ್ತದೆ. ಕ್ಲಬ್ ಹೌಸ್ನಲ್ಲಿ ಖಾತೆ ತೆರೆಯಲು ಕನಿಷ್ಟ ವಯೋಮಿತಿ ಅನ್ನೋದು ಇಲ್ಲವಾದ ಕಾರಣ ಮಕ್ಕಳಿಗೆ ಇದರಿಂದ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ.