ನಿಫಾ ರೋಗ ಲಕ್ಷಣ ಹೊಂದಿದ್ದ 8 ಮಂದಿಯ ವರದಿಯಲ್ಲಿ ನೆಗೆಟಿವ್ ಬಂದಿದ್ದು ಇದರಿಂದ ಕೇರಳಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ವಿಚಾರವಾಗಿ ಮಾತನಾಡಿದ್ದು ರೋಗ ಲಕ್ಷಣಹೊಂದಿದ್ದವರಿಂದ ತಲಾ ಮೂರು ಮಾದರಿಯ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಈ ಸ್ಯಾಂಪಲ್ಗಳನ್ನು ಎಸ್ಐವಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಫಲಿತಾಂಶ ನೆಗೆಟಿವ್ ಬಂದಿದೆ. ಇನ್ನೂ ಐವರ ವರದಿ ಬರಬೇಕಿದೆ ಎಂದು ಹೇಳಿದ್ರು.
ಕೇರಳದ ಕೋಜಿಕೊಡೆಯ ಚಥಮಂಗಲಂನ 12 ವರ್ಷದ ಬಾಲಕ ಭಾನುವಾರ ನಿಫಾದಿಂದ ಸಾವಿಗೀಡಾಗಿದ್ದನು. ಈತನ ಪ್ರಾಥಮಿಕ ಸಂಪರ್ಕಿತರೆಂದು 251 ಮಂದಿಯನ್ನು ಗುರುತಿಸಲಾಗಿತ್ತು. ಇದರಲ್ಲಿ 54 ಮಂದಿ ಹೈ ರಿಸ್ಕ್ ಗ್ರೂಪ್ ಎಂದು ವಿಭಾಗಿಸಲಾಗಿತ್ತು. 251 ಮಂದಿಯಲ್ಲಿ 129 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿದ್ದರು. ಈಗ ನೆಗೆಟಿವ್ ವರದಿ ಹೊಂದಿದರವಲ್ಲಿ ಮೃತ ಬಾಲಕನ ತಾಯಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದ್ದಾರೆ.
ರೋಗ ಲಕ್ಷಣ ಹೊಂದಿದ್ದ ಮೃತ ಬಾಲಕನ ಪೋಷಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದೆ. ಇದರಿಂದ ನಮಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
ಕೇರಳದಲ್ಲಿ ಎರಡು ವರ್ಷಗಳ ಹಿಂದೆ ಅಂದರೆ 2018ರ ಮೇ 1ರಂದು ದೇಶದ ಮೊದಲ ನಿಫಾ ಸೋಂಕು ಪತ್ತೆಯಾಗಿತ್ತು. ದೇಶ ಮಟ್ಟದಲ್ಲಿ ಭಾರೀ ಭೀತಿಯನ್ನು ಸೃಷ್ಟಿಸಿದ್ದ ಈ ಕಾಯಿಲೆಯಿಂದ ಬಚಾವಾಗುವಲ್ಲಿ ಕೇರಳ ಯಶಸ್ವಿಯಾಗಿತ್ತು. ಇದು ಬಾವಲಿ ಹಾಗೂ ಹಂದಿಗಳ ಮೂಲಕ ಹರಡುವ ವೈರಸ್ ಆಗಿದೆ. ಈ ಸೋಂಕು ತಾಕಿಸಿಕೊಂಡ ವ್ಯಕ್ತಿಯು ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಾರೆ.