
ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿಸಲು ಅವಕಾಶವಿದ್ದರೂ ಸಹ ಉದ್ದೇಶಪೂರ್ವಕವಾಗಿ ಇದನ್ನು ನಿರಾಕರಿಸಿ ಸುಸ್ತಿದಾರರಾಗಿರುವ 50 ಮಂದಿಯ ಪಟ್ಟಿಯನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದು, ಇದರಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಅವರ ಕಂಪನಿ ಅಗ್ರಸ್ಥಾನದಲ್ಲಿದೆ.
ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಜೆಮ್ಸ್ ಬರೋಬ್ಬರಿ 8,738 ಕೋಟಿ ರೂಪಾಯಿಗಳ ಮೊತ್ತವನ್ನು ಬಾಕಿ ಇರಿಸಿಕೊಂಡಿದ್ದು, ಇನ್ನುಳಿದಂತೆ ಎರಾ ಇನ್ಫ್ರಾ ಇಂಜಿನಿಯರಿಂಗ್ ಲಿಮಿಟೆಡ್ 5,750 ಕೋಟಿ ರೂಪಾಯಿ, ಆರ್‌ಇಐ ಆಗ್ರೋ ಲಿಮಿಟೆಡ್ 5,148 ಕೋಟಿ ರೂಪಾಯಿ, ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ 4,774 ಕೋಟಿ ರೂಪಾಯಿ ಹಾಗೂ ಕ್ಯಾನ್ಕಾಸ್ಟ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ 3,911 ಕೋಟಿ ರೂಪಾಯಿ ಬಾಕಿ ಮೊತ್ತದೊಂದಿಗೆ ಟಾಪ್ 5 ಸ್ಥಾನದಲ್ಲಿವೆ.
ಒಟ್ಟಾರೆ ಅಗ್ರ ಐವತ್ತು ಸುಸ್ತಿದಾರರು ವಿವಿಧ ಬ್ಯಾಂಕುಗಳಿಗೆ ಪಾವತಿಸಬೇಕಾದ ಮೊತ್ತ 87,295 ಕೋಟಿ ರೂಪಾಯಿಗಳು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ ಮಾಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಗವತ್ ಕರಾಡ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಕಳೆದ ಐದು ಹಣಕಾಸು ವರ್ಷಗಳಲ್ಲಿ SCB ಗಳು ಒಟ್ಟು 10,57,326 ಕೋಟಿ ರೂಪಾಯಿಗಳನ್ನು ರೈಟ್ ಆಫ್ ಮಾಡಿವೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.