ಚೀನಾದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದ್ದು ಹೈಲಾಂಗ್ಜಿಯಾಂಗ್ ಪ್ರಾಂತ್ಯದ ಜಿಮ್ನಾಷಿಯಂನಲ್ಲಿ ಹಿಮಪಾತದಿಂದ ಕಟ್ಟಡ ಕುಸಿದಿದ್ದು ಕನಿಷ್ಟ ಮೂವರು ಸಾವನ್ನಪ್ಪಿದ್ದು ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದು ಈ ವರ್ಷ ಈ ಪ್ರಾಂತ್ಯದಲ್ಲಿ ಎರಡನೇ ಬಾರಿ ನಡೆದ ಕಟ್ಟಡ ಕುಸಿತದ ಘಟನೆಯಾಗಿದೆ.
ಜಿಯಾಮಸಿ ನಗರದ ಯುಚೆಂಗ್ ಜಿಮ್ ಸ್ಟೇಡಿಯಂನಲ್ಲಿ ಕಟ್ಟಡ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಅಲ್ಲಿ ಮಕ್ಕಳು ಸಹ ಇದ್ದರು ಎನ್ನಲಾಗಿದೆ. ರಕ್ಷಣಾ ಪಡೆ ಸಿಬ್ಬಂದಿ ಬದುಕಿದ್ದವರ ಹುಡುಕಾಟಕ್ಕಾಗಿ ಬಾಸ್ಕೆಟ್ಬಾಲ್ ಮೈದಾನದಲ್ಲಿ ಸಂಪೂರ್ಣ ಆವೃತಗೊಂಡಿದ್ದ ಕಾಂಕ್ರೀಟ್ ಅವಶೇಷಗಳ ಅಡಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಮವಾರದಂದು ಈ ಘಟನೆ ಸಂಭವಿಸಿದ್ದು ಅಧಿಕೃತವಾಗಿ ಸಾವನ್ನಪ್ಪಿದವರ ಸಂಖ್ಯೆಯನ್ನು ಅಧಿಕಾರಿಗಳು ಮಂಗಳವಾರ ಘೋಷಣೆ ಮಾಡಿದ್ದಾರೆ.
ಅಧಿಕಾರಿಗಳ ಪ್ರಕಾರ ಜಿಮ್ ಉಸ್ತುವಾರಿ ವಹಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜಿಮ್ ಕುಸಿತಗೊಂಡ ಸಂದರ್ಭದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಬಗ್ಗೆ ಈವರೆಗೆ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಈ ಘಟನೆಯು ಚೀನಾದ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಸಖತ್ ವೈರಲ್ ಆಗಿದೆ. ಈ ವರ್ಷದ ಜುಲೈ ತಿಂಗಳಲ್ಲಿ ಇದೇ ಪ್ರಾಂತ್ಯದಲ್ಲಿ ಜಿಮ್ ಕುಸಿತಗೊಂಡಿದ್ದು 11 ಮಂದಿ ಸಾವನ್ನಪ್ಪಿದ್ದರು ಎನ್ನಲಾಗಿದೆ.