ಅತೀ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ಪ್ರದೇಶದಲ್ಲಿ ಪ್ರವಾಹ ಭೀತಿಯನ್ನ ತಪ್ಪಿಸುವ ಸಲುವಾಗಿ ಚೀನಾದ ಮಿಲಿಟರಿ ಅಣೆಕಟ್ಟನ್ನು ಸ್ಫೋಟ ಮಾಡಿದ್ದು ಇದರಿಂದಾಗಿ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಲ್ಯುಯಾಂಗ್ ನಗರದಲ್ಲಿ ಮಂಗಳವಾರ ರಾತ್ರಿ ಮಿಲಿಟರಿ ಪಡೆ ಅಣೆಕಟ್ಟು ಕಾರ್ಯಾಚರಣೆ ನಡೆಸಿದ್ರು. ಕಳೆದೊಂದು ದಿನದಿಂದ ಚೀನಾದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹೆನಾನ್ ಪ್ರಾಂತ್ಯದ Zhengzhou ಎಂಬಲ್ಲಿ ರಸ್ತೆಗಳು, ಶಾಲಾ ಕಟ್ಟಡಗಳು, ಸೇರಿದಂತೆ ಅನೇಕ ಮನೆಗಳು ಮುಳುಗಡೆಯಾಗಿದೆ. ಹೀಗಾಗಿ ಪ್ರವಾಹದ ದಿಕ್ಕನ್ನ ತಪ್ಪಿಸಬೇಕು ಎಂಬ ಉದ್ದೇಶದಿಂದ ಚೀನಾ ಮಿಲಿಟರಿ ಪಡೆ ಈ ಕಾರ್ಯಾಚರಣೆ ನಡೆಸಿದೆ.
ಇನ್ನು 7 ಮಂದಿ ಕಾಣೆಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಚೀನಾದ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ದಿ ಪೇಪರ್ ತನ್ನ ಟ್ವಿಟರ್ ಖಾತೆಯಲ್ಲಿ ಚೀನಾದ ಫೋಟೋವನ್ನ ಶೇರ್ ಮಾಡಿದೆ.
ಭಾರೀ ಮಳೆಯಿಂದಾಗಿ 10ಕ್ಕೂ ಹೆಚ್ಚು ರೈಲುಗಳ ಓಡಾಟ ಸ್ಥಗಿತಗೊಂಡಿದೆ. ಪ್ರಯಾಣಿಕರನ್ನ ಹೊತ್ತ ಕನಿಷ್ಟ ಮೂರು ರೈಲುಗಳಂತೂ 40 ಗಂಟೆಗೂ ಅಧಿಕ ಕಾಲ ಒಂದೇ ಸ್ಥಳದಲ್ಲಿ ನಿಂತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರೀ ಮಳೆಯಿಂದಾಗಿ 26ಕ್ಕೂ ಅಧಿಕ ಹೆದ್ದಾರಿಗಳು ಬಂದ್ ಆಗಿದೆ ಎಂದು ಸಾರಿಗೆ ಸಚಿವಾಲಯ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.