ಅರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿರುವ ಮಕ್ಕಳು ರಸ್ತೆ ಅಪಘಾತಕ್ಕೆ ತುತ್ತಾಗುವ ಸಾಧ್ಯತೆಗಳು ಬಹಳ ಇವೆ ಎಂದು ಯುನೆಸ್ಕೋದ ವರದಿಯೊಂದು ತಿಳಿಸುತ್ತಿದೆ.
ತುಲನಾತ್ಮಕವಾಗಿ ಕಡಿಮೆ ವಾಹನಗಳಿರುವ ಹಿಂದುಳಿದ ದೇಶಗಳ ರಸ್ತೆಗಳಲ್ಲೇ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಗ್ಲೋಬಲ್ ಎಜುಕೇಷನ್ ಮಾನಿಟರಿಂಗ್ (ಜಿಇಎಂ) ಹೆಸರಿನ ಈ ವರದಿಯಲ್ಲಿ ತಿಳಿಸಲಾಗಿದೆ. ಶಾಲೆಗಳಿಗೆ ತೆರಳುವ ಸಂದರ್ಭದಲ್ಲಿ ಮಕ್ಕಳಿಗೆ ರಸ್ತೆ ಅಪಘಾತವಾಗುವ ಸಾಧ್ಯತೆ ಬಹಳ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಂತಾರಾಷ್ಟ್ರೀಯ ರಸ್ತೆ ವಿಶ್ಲೇಷಣೆಯಲ್ಲಿ 60 ದೇಶಗಳ 2.5 ಲಕ್ಷ ಕಿಮೀಗೂ ಹೆಚ್ಚಿನ ಉದ್ದದ ರಸ್ತೆಗಳ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲಾಗಿದ್ದು, ಈ ರಸ್ತೆಗಳ ಪೈಕಿ 80%ಗಿಂತ ಹೆಚ್ಚಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆಯ ಸರಾಸರಿ ವೇಗ 40ಕಿಮೀ/ಗಂಟೆಯಷ್ಟಿದ್ದು, ರಸ್ತೆಗಳನ್ನು ದಾಟುವ ಸಂದರ್ಭದಲ್ಲಿ ಪಾದಚರಿಗಳಿಗೆ ಭಾರೀ ಸವಾಲುಗಳು ಇವೆ ಎನ್ನಲಾಗಿದೆ.
ಇಲ್ಲಿದೆ ಪ್ರಾಣ ರಕ್ಷಿಸಿದ ವೈದ್ಯನನ್ನು 25 ವರ್ಷಗಳ ಬಳಿಕ ಭೇಟಿಯಾದ ವ್ಯಕ್ತಿಯ ಹೃದಯಸ್ಪರ್ಶಿ ಕಥೆ
“ಬಹಳ ದೊಡ್ಡ ಅಪಾಯಗಳ ಪೈಕಿ ರಸ್ತೆ ಅಪಘಾತಗಳು ಮೊದಲ ಸ್ಥಾನದಲ್ಲಿವೆ. ಬಹಳಷ್ಟು ಶಾಲೆಗಳು ದೊಡ್ಡ ಹೆದ್ದಾರಿಗಳ ಸನಿಹದಲ್ಲೇ ಇರುವ ಕಾರಣ ಶಾಲೆಗಳಿಗೆ ನಡೆದುಕೊಂಡು ಹೋಗುತ್ತಿರುವ ಮಕ್ಕಳಲ್ಲಿ ಅಪಘಾತಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ದೊಡ್ಡವರಿಗೆ ಹೋಲಿಸಿದಲ್ಲಿ ಮಕ್ಕಳಲ್ಲಿ ಅಪಾಯ ಗ್ರಹಿಕೆಯ ಕ್ಷಮತೆ ಕಡಿಮೆ ಇರುವುದಲ್ಲದೇ, ತಮ್ಮ ಸ್ವಾಭಾವಿಕ ನಡತೆಯ ಮೇಲೆ ಹಿಡಿತವಿಲ್ಲದ ಕಾರಣ ಅಪಘಾತಕ್ಕೆ ಸಿಲುಕುವ ಸಾಧ್ಯತೆಗಳು ಜೋರಾಗಿವೆ. ಬಡ ದೇಶಗಳಲ್ಲಿ ಸಂಚಾರವು ಬಹಳ ಅಪಾಯಕಾರಿಯಾಗಿದೆ. ಯೋಜನೆಯಿಲ್ಲದೇ ಬೃಹತ್ ಮಟ್ಟದಲ್ಲಿ ಮಾಡುವ ಅಭಿವೃದ್ಧಿ ಕೆಲಸಗಳಿಂದಾಗಿ ನಗರಗಳ ಸಂಚಾರ ದಟ್ಟಣೆಯ ಸಮಸ್ಯೆಗಳಿಗೆ ಉತ್ತರವಿಲ್ಲದಂತಾಗಿದ್ದು, ಪಾದಚಾರಿಗಳಿಗೆ ಭಾರೀ ಅಪಾಯದ ಸಾಧ್ಯತೆಗಳು ಇರುತ್ತವೆ. ಇದರೊಂದಿಗೆ ಸಂಚಾರಿ ಕಾನೂನುಗಳು ಸಹ ಕಠಿಣವಾಗಿಲ್ಲ. ಕಡಿಮೆ ಸಂಚಾರವಿದ್ದರೂ ಸಹ ಬಡದೇಶಗಳಲ್ಲಿ ರಸ್ತೆ ಅಪಘಾತಗಳ ಸಾಧ್ಯತೆಗಳು ಇರುತ್ತವೆ,” ಎಂದು ವರದಿಯಲ್ಲಿ ವಿವರಿಸಲಾಗಿದೆ.
ರಸ್ತೆ ಸುರಕ್ಷತೆ ಸಂಬಂಧ ಶಿಕ್ಷಣ, ಅರಿವಿನ ಅಭಿಯಾನಗಳು, ಕಾನೂನಿನ ಅರಿವು, ಶಾಲೆಗಳಿಗೆ ಸುರಕ್ಷಿತ ಮಾರ್ಗಗಳ ನಿರ್ಮಾಣ, ಕಡಿಮೆ ಆದಾಯದ ಕುಟುಂಬಗಳಿಗೆ ಕಾರುಗಳಲ್ಲಿ ಉಚಿತ ಸೀಟುಗಳು ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿರುವ ಕೊರಿಯಾ ಗಣರಾಜ್ಯದ ಉದಾಹರಣೆ ಕೊಟ್ಟ ವರದಿ, 1988ರಲ್ಲಿ 1,766ರಷ್ಟಿದ್ದ ಅಪಫಾತಗಳನ್ನು 2021ರಲ್ಲಿ 83ಕ್ಕೆ ಇಳಿಸಲಾಗಿದ್ದು, ಈ ಉದಾಹರಣೆಯನ್ನು ಮಿಕ್ಕ ಬಡದೇಶಗಳು ಪರಿಗಣಿಸಿ ನೋಡಬೇಕಿದೆ ಎಂದು ಸೂಚಿಸಲಾಗಿದೆ.