ಛತ್ತೀಸಗಢದ ಆಡಳಿತಾರೂಢ ಕಾಂಗ್ರೆಸ್ ಶಾಸಕರೊಬ್ಬರು ಮೀನು ಸಾಕಣಿಕಾ ಕೊಳದ ವಿಚಾರವಾಗಿ ಬಲರಾಂಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯನ್ನು ನಿಂದಿಸುತ್ತಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ರಾಮಾನುಗಂಜ್ ಪಟ್ಟಣಕ್ಕೆ ಡೆಪ್ಯೂಟಿ ಕಲೆಕ್ಟರ್ ಆಗಿ ಪ್ರಫುಲ್ ರಾಜಕ್ ನೇಮಕಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋ ಕ್ಲಿಪ್ನಲ್ಲಿ ಶಾಸಕರಿಂದ ನಿಂದಿಸಿಕೊಳ್ಳುತ್ತಿರುವ ಅಧಿಕಾರಿ ತಾನೇ ಎಂದು ಹೇಳಿಕೊಂಡಿದ್ದಾರೆ. ಬುಧವಾರ ಸಂಜೆ ಕರೆ ಮಾಡಿದ ಶಾಸಕರು ನನ್ನನ್ನು ನಿಂದಿಸಿದ್ದಾರೆ ಎಂದು ಹೇಳಿದ್ರು. ಆದರೆ ಈ ಎಲ್ಲಾ ಆರೋಪಗಳನ್ನು ಶಾಸಕ ತಳ್ಳಿ ಹಾಕಿದ್ದಾರೆ.
ರಾಮಾನುಜಗಂಜ್ ಕ್ಷೇತ್ರದ ಶಾಸಕ ಬ್ರಹಸ್ಪತ್ ಸಿಂಗ್ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಮ್ಮ ಪಕ್ಷದ ಕೆಲ ಹಿರಿಯ ನಾಯಕರು ಹಾಗೂ ಬಿಜೆಪಿಯವರು ಸೇರಿ ನನ್ನ ರಾಜಕೀಯ ಜೀವನಕ್ಕೆ ಮಸಿ ಬಳಿಯಲು ಈ ರೀತಿಯ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ವಿರೋಧ ಪಕ್ಷ ಬಿಜೆಪಿ ನಾಯಕರು ಬ್ರಹಸ್ಪತ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಂದಹಾಗೆ ಈ ಎಲ್ಲಾ ಘಟನೆಗೆ ಮುಖ್ಯ ಕಾರಣ ಮೀನು ಸಾಕಣಿಗೆ ಗುತ್ತಿಗೆಯಾಗಿದೆ. ಕೆರೆಯಲ್ಲಿ ಮೀನು ಸಾಕಣಿಕೆ ಗುತ್ತಿಗೆ ವಿಚಾರದಲ್ಲಿ 2 ಗುಂಪುಗಳ ನಡುವೆ ವಿವಾದ ಏರ್ಪಟ್ಟಿತ್ತು. ಕಂದಾಯ ಇಲಾಖೆ ಅಧಿಕಾರಿ ಒಂದು ಗುಂಪಿನ ಪರವಾಗಿದ್ದರೆ ಶಾಸಕ ಸಿಂಗ್ ಇನ್ನೊಂದು ಗುಂಪಿನ ಪರವಾಗಿದ್ದರು ಎನ್ನಲಾಗಿದೆ.