ಲೈಂಗಿಕ ದೌರ್ಜನ್ಯ ಮಾಡಲು ಮುಂದಾಗಿದ್ದ 40 ವರ್ಷದ ವ್ಯಕ್ತಿಯನ್ನ 21 ವರ್ಷದ ಯುವತಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಯುವತಿಯನ್ನ ಬಂಧಿಸಿದ ಪೊಲೀಸರು ಬಳಿಕ ಯಾವುದೇ ಆರೋಪಗಳನ್ನೂ ಹೊರಿಸದೆ ಬಿಡುಗಡೆ ಮಾಡಿದ್ದಾರೆ.
ಚೆನ್ನೈನ ಮಿಂಜೂರ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಯುವತಿಯು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕೆ ಒಬ್ಬಳೇ ಇದ್ದಿದ್ದನ್ನ ಗಮನಿಸಿದ ಮೃತ ವ್ಯಕ್ತಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಂತ್ರಸ್ತೆ ವ್ಯಕ್ತಿಯನ್ನ ನೆಲಕ್ಕೆ ತಳ್ಳಿದಳು ಈ ವೇಳೆ ಆತನ ತಲೆ ಕಲ್ಲಿಗೆ ಬಡಿದ ಕಾರಣ ಆತ ಪ್ರಜ್ಞಾಹೀನನಾದನು. ಬಳಿಕ ಆ ವ್ಯಕ್ತಿಯನ್ನ ಯುವತಿ ರಸ್ತೆ ಬದಿಗೆ ಎಳೆದುಕೊಂಡು ಬಂದಳು. ಇದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿಗೆ ಆಕೆ ಸಂಪೂರ್ಣ ವಿವರಣೆ ನೀಡಿದಳು. ಕೂಡಲೇ ಪತಿ ಸಹಕೆಲಸಗಾರರ ಜೊತೆ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದು, ಈ ವೇಳೆಗಾಗಲೇ ಆರೋಪಿ ಸಾವನ್ನಪ್ಪಿದ್ದ ಎನ್ನಲಾಗಿದೆ.
ಮಹಿಳೆಯ ವಿರುದ್ಧ ಪೊಲೀಸರು ಸೆಕ್ಷನ್ 100(ರಕ್ಷಣೆಗಾಗಿ ವ್ಯಕ್ತಿಯ ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಆಕೆಯನ್ನ ಬಿಡುಗಡೆ ಮಾಡಿದ್ದಾರೆ.