ತನ್ನ ಸೈಕಲ್ ಕದ್ದಿದ್ದ ಕಳ್ಳನನ್ನು ಬೆನ್ನಟ್ಟಿದರೂ ಸಹ ಆತನಿಂದ ಸೈಕಲ್ ವಾಪಸ್ ಪಡೆದುಕೊಳ್ಳುವಲ್ಲಿ ವಿಫಲನಾಗಿದ್ದ ಏಳು ವರ್ಷದ ಬಾಲಕನಿಗೆ ಪೊಲೀಸರು ಸೈಕಲ್ನ್ನು ಮರಳಿ ತಲುಪಿಸಿದ್ದು ಇದರಿಂದ ಬಾಲಕನ ಸಂತಸಕ್ಕೆ ಪಾರವೇ ಇಲ್ಲ ಎಂಬಂತಾಗಿದೆ.
ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ಫೂಟೇಜ್ನಲ್ಲಿ ಕೆಂಪು ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿದ ವ್ಯಕ್ತಿಯು ಫೆಬ್ರವರಿ ಮೂರರ ಸಂಜೆ 7:30ರ ಸುಮಾರಿಗೆ ಚೆನ್ನೈನ ಪುರಸಾವಲ್ಕಮ್ ಬಳಿ ಇರುವ ಅಪಾರ್ಟ್ಮೆಂಟ್ ಒಳಗೆ ನುಸುಳುತ್ತಿರುವುದನ್ನು ಕಾಣಬಹುದಾಗಿದೆ. ಅಪಾರ್ಟ್ಮೆಂಟ್ ಒಳಹೊಕ್ಕಿದ ಕೆಲವೇ ಸೆಕೆಂಡುಗಳಲ್ಲಿ ಸೈಕಲ್ ಜೊತೆಗೆ ಕಳ್ಳ ಹೊರಬಂದಿದ್ದಾನೆ. ಈತನ ಹಿಂದೆಯೇ ಮಹಿಳೆ ಹಾಗೂ ಬಾಲಕ ಆತನನ್ನು ಬೆನ್ನಟ್ಟಿದ್ದಾರೆ.
ಇನ್ನು ಪ್ರಕರಣದ ವಿಚಾರವಾಗಿ ಮಾತನಾಡಿದ ಡಿಸಿಪಿ ಕಾರ್ತಿಕೇಯನ್ ಬಾಲಕ ಕಳ್ಳನನ್ನು ಚೇಸ್ ಮಾಡುತ್ತಿರುವ ವಿಡಿಯೋ ನೋಡಿದ ಬಳಿಕ ಬಾಲಕನ ಧೈರ್ಯವನ್ನು ಕಂಡು ನಾನು ರೋಮಾಂಚಿತನಾದೆ. ಅಂದೇ ನಾನು ಪೊಲೀಸರು ಆತನ ಸೈಕಲ್ ವಾಪಸ್ ತಂದುಕೊಡುತ್ತಾರೆ ಎಂಬ ವಿಶ್ವಾಸವನ್ನು ಬಾಲಕನ ಮನಸ್ಸಿನಲ್ಲಿ ಬಿತ್ತಬೇಕು ಎಂದು ಭಾವಿಸಿದೆ.
ಮಾರನೇ ದಿನ ನಾವು ಆರೋಪಿ ಅಸರ್ನನ್ನು ಬಂಧಿಸಿದೆವು. ಆದರೆ ಆರೋಪಿಯ ಬಗ್ಗೆ ನನಗೂ ಬೇಸರವಿದೆ. ಆತನ ತಂದೆ ತೀರಿ ಹೋಗಿದ್ದಾರೆ. ಈತನ ದಾರಿಯನ್ನು ತಪ್ಪಿಸಿ ಆತನಿಗೆ ಮಾದಕ ದ್ರವ್ಯ ವ್ಯಸನಿಯಾಗುವಂತೆ ಕೆಲವರು ಮಾಡಿದ್ದರು. ಹೀಗಾಗಿ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸದೇ ಸಿಎಸ್ಆರ್ ದಾಖಲಿಸಿಕೊಂಡು ಆರೋಪಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದರು.