ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ಸೃಷ್ಟಿಸಿರುವ ಓಪನ್‌ಎಐನ ಚಾಟ್‌ಜಿಪಿಟಿ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದೆ ಅನ್ನೋದೇನೋ ನಿಜ. ಆದರೆ ಸ್ಯಾಮ್ ಆಲ್ಟ್‌ಮನ್‌ರ ಎಐ ಅಭಿವೃದ್ಧಿ ಸ್ಟುಡಿಯೋ ಶೀಘ್ರದಲ್ಲೇ ದಿವಾಳಿಯಾಗುವ ಸಾಧ್ಯತೆ ಇದೆ ಎಂದು ಅನಲಿಟಿಕ್ಸ್ ಇಂಡಿಯಾ ನಿಯತಕಾಲಿಕೆ ವರದಿ ಮಾಡಿದೆ.
ಮೈಕ್ರೋಸಾಫ್ಟ್, ಖೋಸ್ಲಾ ವೆಂಚರ್ಸ್ ಹಾಗೂ ರೀಯ್ಡ್ ಹಾಫ್‌ಮನ್‌ನಂಥ ದಿಗ್ಗಜರು ಓಪನ್‌ಎಐಗೆ ಫಂಡಿಂಗ್ ಮಾಡುತ್ತಾ ಬಂದಿದ್ಧಾರೆ. ಕಳೆದ ಮೇ ನಿಂದ ಜುಲೈ ನಡುವೆ ಚಾಟ್‌ಜಿಪಿಟಿ ಬಳಕೆದಾರರ ಸಂಖ್ಯೆ ಗಣನೀಯವಾಗಿ ಇಳಿಯುತ್ತಾ ಬಂದಿದೆ. 1.7 ಶತಕೋಟಿಯಷ್ಟಿದ್ದ ಚಾಟ್‌ಜಿಪಿಟಿ ಬಳಕೆದಾರರ ಸಂಖ್ಯೆ ಜುಲೈನಲ್ಲಿ 1.5 ಶತಕೋಟಿಗೆ ಇಳಿದಿದೆ.
ಜನರೇಟಿವ್ ಎಐ ತಂತ್ರಜ್ಞಾನದ ಬೆನ್ನೆಲುಬಾಗಿರುವ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್‌ಎಲ್‌ಎಂ) ಬಳಕೆ ಮಾಡಲು ಚಾಟ್‌ಜಿಪಿಟಿ ಮಾತೃ ಸಂಸ್ಥೆ ಓಪನ್ ಎಐ ಮುಕ್ತವಾದ ಅವಕಾಶ ಕೊಟ್ಟಿರಲಿಲ್ಲ. ಮೆಟಾ ಹಾಗೂ ಮೈಕ್ರೋಸಾಫ್ಟ್ ಸಹಭಾಗಿತ್ವದಲ್ಲಿ ಮೂಡಿಬಂದಿರುವ LLaMA 2ನಂಥ ಭಾಷೆಗಳನ್ನು ಮುಕ್ತವಾಗಿ ಬಳಸಬಹುದಾದ ಅವಕಾಶ ಇರುವುದು ಓಪನ್‌ಎಐಗೆ ಹಿನ್ನೆಡೆಯಾಗಿದೆ.
ಸೂಕ್ತವಾದ ಬ್ಯುಸಿನೆಸ್ ಮಾಡೆಲ್‌ನ ಕೊರತೆ ಕಾರಣ ಚಾಟ್‌ಜಿಪಿಟಿ ಅಭಿವೃದ್ಧಿಯಾದಾಗಿನಿಂದ ಇದುವರೆಗೂ ಓಪನ್‌ಎಐಗೆ $540 ದಶಲಕ್ಷದಷ್ಟು ನಷ್ಟವಾಗಿದೆ. ಹೋಗಲಿ ಶೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ಶೇರುಗಳನ್ನಾದರೂ ತೇಲಿಸೋಣವೆಂದರೆ, ಕನಿಷ್ಠ 10 ವರ್ಷಗಳ ಅನುಭವ ಹಾಗೂ $100 ದಶಲಕ್ಷದಷ್ಟು ಆದಾಯ ಇಲ್ಲದೇ ಇರುವ ಕಾರಣ ಅದೂ ಸಾಧ್ಯವಾಗುತ್ತಿಲ್ಲ.
ಚಾಟ್‌ಜಿಪಿಟಿಯಿಂದಾಗಿ ಓಪನ್ ಎಐಗೆ ಪ್ರತಿನಿತ್ಯ $700,000 ಖರ್ಚಾಗುತ್ತಿದೆ. ಚಾಟ್‌ಜಿಪಿಟಿಯ 3.5 ವರ್ಶನ್ ಬಳಕೆದಾರರಿಗೆ ಉಚಿತವಾಗಿ ಸಿಕ್ಕರೂ ಸಹ 4.0 ವರ್ಶನ್‌ಗೆ ಹಣ ಪಾವತಿ ಮಾಡಬೇಕಾಗುತ್ತದೆ. ಅಲ್ಲದೇ ಜಿಪಿಟಿ 4 ಹಾಗೂ ಡಾಲ್ – ಇ2 ಆಧರಿತ ಚಾಟ್‌ಬಾಟ್‌ಗಳ ಖರೀದಿಯಿಂದ ಓಪನ್ ಎಐ ಹಣ ಮಾಡಬಹುದಾದರೂ ಈ ವಿಚಾರವಾಗಿ ಸ್ಪಷ್ಟವಾದ ಮಾಹಿತಿ ಇಲ್ಲ.