alex Certify ಶಿವಮೊಗ್ಗ : ಡಿ.22 ರಂದು ಸಿರಿಧಾನ್ಯ ನಡಿಗೆ , ಡಿ.27 ರಂದು ಸಿರಿಧಾನ್ಯ ಮೇಳ ಆಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ : ಡಿ.22 ರಂದು ಸಿರಿಧಾನ್ಯ ನಡಿಗೆ , ಡಿ.27 ರಂದು ಸಿರಿಧಾನ್ಯ ಮೇಳ ಆಯೋಜನೆ

ಶಿವಮೊಗ್ಗ : ಜಿಲ್ಲಾ ಮಟ್ಟದಲ್ಲಿ ನಡೆಯುವ ಸಿರಿಧಾನ್ಯ ನಡಿಗೆ(ವಾಕಥಾನ್) ಹಾಗೂ ಸಿರಿಧಾನ್ಯ ಮೇಳಕ್ಕೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಸೂಚನೆ ನೀಡಿದರು.

ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಸಿರಿಧಾನ್ಯ ಮೇಳ ಆಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿರಿಧಾನ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಹಾಗೂ ಅವುಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಡಿ.22 ರಂದು ಸಿರಿಧಾನ್ಯ ನಡಿಗೆ ಮತ್ತು ಡಿ.27 ರಂದು ಸಿರಿಧಾನ್ಯ ಮೇಳವನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ.

ಡಿ.22 ರಂದು ಬೆಳಿಗ್ಗೆ 6.30 ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಗಿಡಗಳನ್ನು ನೆಡುವ ಮೂಲಕ ಸಿರಿಧಾನ್ಯ ವಾಕಥಾನ್ಗೆ ಚಾಲನೆ ನೀಡಲಾಗುವುದು. ವಾಕಥಾನ್ ನೆಹರೂ ಕ್ರೀಡಾಂಗಣದಿಂದ ಹೊರಟು ಮಹಾವೀರ ವೃತ್ತ, ಗೋಪಿ ವೃತ್ತ, ಜೈಲ್ ವೃತ್ತ, ಎಸ್.ಎಂ ವೃತ್ತದಿಂದ ಸಾಗಿ ಬಂದು ನೆಹರೂ ಕ್ರೀಡಾಂಗಣ ತಲುಪುವುದು.

ವಾಕಥಾನ್ನಲ್ಲಿ ಕೃಷಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು, ಯೋಗ ಮತ್ತು ವಿವಿಧ ಆಸಕ್ತ ಸಂಸ್ಥೆಗಳ ಅಭ್ಯರ್ಥಿಗಳು ಪಾಲ್ಗೊಂಡು ಸಿರಿಧಾನ್ಯಗಳ ಕುರಿತಾದ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗುವರು. ಹಾಗೂ ಕೃಷಿ ಇಲಾಖೆಯ 7 ಕೃಷಿ ಸಂಜೀವಿನಿ ವಾಹನಗಳ ಮೂಲಕವೂ ಸಿರಿಧಾನ್ಯ ಮಹತ್ವವನ್ನು ಪ್ರದರ್ಶಿಸಲಾಗುವುದು.

ಡಿ.27 ರಂದು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 11.30 ರಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದ ಅವರು ಕುವೆಂಪು ರಂಗಮಂದಿರದ ಹೊರಭಾಗದಲ್ಲಿ ಸುಮಾರು 30 ಸಿರಿಧಾನ್ಯಗಳ ಕುರಿತಾದ ಮಳಿಗೆಗಳನ್ನು ಸ್ಥಾಪಿಸುವಂತೆ ತಿಳಿಸಿದರು. ಸಿರಿಧಾನ್ಯಗಳ ಮಳಿಗೆಗಳ ಜೊತೆ ವಿವಿಧ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಬಹುದು. ಆದರೆ ಮುಖ್ಯವಾಗಿ ಸಿರಿಧಾನ್ಯ ಮತ್ತು ಅವುಗಳ ಉತ್ಪನ್ನಗಳ ಕುರಿತಾದ ಮಳಿಗೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಸಿರಿಧಾನ್ಯ ಉತ್ಪನ್ನಗಳ ತಯಾರಿಕರು, ಸ್ವಸಹಾಯ ಗುಂಪುಗಳಿಗೆ ಆಹ್ವಾನ ನೀಡಿ ಮಳಿಗೆ ಸ್ಥಾಪಿಸಬೇಕು. ಜನರಲ್ಲಿ ಸಿರಿಧಾನ್ಯದ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಪಾಲಿಕೆಯವರು ಸ್ವಚ್ಚತೆ, ಪ್ರಚಾರದ ಬ್ಯಾನರ್ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯವರು ಹಾಜರಿರಬೇಕು. ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ವೇದಿಕೆ ಕಾರ್ಯಕ್ರಮ ಏರ್ಪಡಿಸುವಂತೆ ತಿಳಿಸಿದ ಅವರು ವಿವಿಧ ಇಲಾಖೆಗಳು ಮೇಳದ ಯಶಸ್ಸಿಗೆ ಸಹಕರಿಸಬೇಕೆಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ, ಕೃಷಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...