ಮಾರ್ಚ್ 2022ಕ್ಕೆ ಅಂತ್ಯವಾಗಲಿರುವ ಪ್ರಸಕ್ತ ವಿತ್ತೀಯ ವರ್ಷದ ಎರಡನೇ ಅರ್ಧದ ವೆಚ್ಚ ಸರಿದೂಗಿಸಲು ಕೇಂದ್ರ ಸರ್ಕಾರವು 5.03 ಲಕ್ಷ ಕೋಟಿ ರೂಪಾಯಿಗಳನ್ನು ಮಾರುಕಟ್ಟೆಯಿಂದ ಸಂಗ್ರಹಿಸಲು ಮುಂದಾಗಿದೆ.
ಈ ಕುರಿತು ರಿಸರ್ವ್ ಬ್ಯಾಂಕ್ ಜೊತೆಗೆ ಸಮಾಲೋಚನೆ ನಡೆಸಿದ ಕೇಂದ್ರ ಸರ್ಕಾರ, ಎರಡನೇ ಅರ್ಧದ ವಿತ್ತೀಯ ಲೆಕ್ಕಾಚಾರಗಳನ್ನು ಸರಿದೂಗಿಸಲು ಮುಂದಾಗಿದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಿಡಿಪಿಯ 9.5%ರಷ್ಟಿರುವ ವಿತ್ತೀಯ ಕೊರತೆಯನ್ನು 6.8%ಗೆ ತಗ್ಗಿಸಲು ಈ ವರ್ಷದ ಬಜೆಟ್‌ನಲ್ಲಿ ಗುರಿ ಹೊಂದಲಾಗಿದೆ.
ಪ್ರಸಕ್ತ ವರ್ಷದ ಜಿಎಸ್‌ಟಿ ಪರಿಹಾರವನ್ನು ರಾಜ್ಯಗಳಿಗೆ ವಿತರಿಸಲು ಸತತ ಸಾಲದ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಿರುವ ಹಣವೂ ಈ ಮೊತ್ತದಲ್ಲಿ ಸೇರಿದೆ.
ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ಸಾಲ ಪಡೆಯಲು ಅಂದಾಜಿಸಲಾಗಿದ್ದ 7.24 ಲಕ್ಷ ಕೋಟಿ ರೂ.ಗಳಲ್ಲಿ 7.02 ಲಕ್ಷ ಕೋಟಿ ರೂ.ಗಳನ್ನು ಪೂರ್ಣಗೊಳಿಸಲಾಗಿದೆ. ಪೂರ್ಣ ವಿತ್ತೀಯ ವರ್ಷದಲ್ಲಿ 12.05 ಲಕ್ಷ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಪಡೆಯಲು ಸರ್ಕಾರ ಈ ಬಜೆಟ್ ವೇಳೆ ಗುರಿ ಇಟ್ಟುಕೊಂಡಿತ್ತು.
21 ಸಾಪ್ತಾಹಿಕ ಕಂತುಗಳಲ್ಲಿ ತಲಾ 23,000-24,000 ಕೋಟಿ ರೂ.ಗಳಂತೆ ವಿತ್ತೀಯ ವರ್ಷದ ಎರಡನೇ ಅವಧಿಯಲ್ಲಿ ಸಾಲ ಪಡೆಯಲು ಸರ್ಕಾರ ಯೋಜನೆ ರೂಪಿಸಿಕೊಂಡಿದೆ. ಈ ಸಾಲವನ್ನು 2, 5, 10, 14, 30 ಹಾಗೂ 40 ವರ್ಷಗಳ ಭದ್ರತೆಯ ಹಾಗೂ ತೇಲುವ ದರದ ಬಾಂಡ್‌ಗಳ ಮೇಲೆ ಪಡೆಯಲಾಗುತ್ತದೆ.