ಮಹತ್ವದ ಬೆಳವಣಿಗೆ ಒಂದರಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವಾಲಯ, ಪಾಕಿಸ್ತಾನ ಮೂಲದ ಓಟಿಟಿ ಪ್ಲಾಟ್ ಫಾರಂ Vidly TV ಮೇಲೆ ನಿಷೇಧ ಹೇರಿದೆ. ಭಾರತದ ಏಕತೆ, ಸಮಗ್ರತೆ ಹಾಗೂ ಹಿತಾಸಕ್ತಿಗೆ ಧಕ್ಕೆ ತರುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಐಟಿ ನಿಯಮ 2021ರ ಅನ್ವಯ ತನಗಿರುವ ಅಧಿಕಾರವನ್ನು ಬಳಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ತೀರ್ಮಾನ ಕೈಗೊಂಡಿದ್ದು, ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತ ಸೋಮವಾರದಂದು ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ.
Vidly TV ‘ಸೇವಕ್: ದಿ ಕನ್ಫೇಷನ್’ ಎಂಬ ವೆಬ್ ಸೀರೀಸ್ ಪ್ರಸಾರ ಮಾಡುತ್ತಿದ್ದು, ಈಗಾಗಲೇ ಇದರ ಮೂರು ಕಂತುಗಳು ಪ್ರಸಾರವಾಗಿವೆ. ಇದರಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಗಳು ಭಾರತದ ಭದ್ರತೆ, ಏಕತೆ, ಸಮಗ್ರತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತಿವೆ ಎಂದು ಹೇಳಲಾಗಿದೆ.
ಈ ವೆಬ್ ಸೀರೀಸ್ ಮೊದಲ ಕಂತು 2008ರ ಮುಂಬೈ ಅಟ್ಯಾಕ್ ವಾರ್ಷಿಕೋತ್ಸವ ದಿನವಾದ ನವೆಂಬರ್ 26ರಂದೇ ಪ್ರಸಾರವಾಗಿದ್ದು, ಹಲವು ವಿಷಯಗಳನ್ನು ತಿರುಚಲಾಗಿತ್ತು. ಆ ಬಳಿಕ ಆಪರೇಷನ್ ಬ್ಲೂ ಸ್ಟಾರ್, ಅಯೋಧ್ಯೆ ಬಾಬರಿ ಮಸೀದಿ, ಮಾಲೆಗಾಂವ್ ಬ್ಲಾಸ್ಟ್ ಮೊದಲಾದ ವಿಷಯಗಳನ್ನು ತಿರುಚಿ ಪ್ರಸಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.