ಕವಾಲಾ: ಉತ್ತರ ಗ್ರೀಸ್‌ನಲ್ಲಿ ಕವಾಲಾ ನಗರದ ಬಳಿ ಕಾರ್ಗೋ ವಿಮಾನ ಪತನಗೊಂಡಿದೆ. ಆಂಟೊನೊವ್ 12 ಸರಕು ಸಾಗಣೆ ವಿಮಾನವು ಉತ್ತರ ಗ್ರೀಸ್ ನಲ್ಲಿ ಶನಿವಾರ ಪತನಗೊಂಡಿದೆ. ದೇಶದ ಉತ್ತರ ಭಾಗದಲ್ಲಿರುವ ಪೇಲಿಯೊಚೋರಿ ಕವಾಲಾಸ್ ಬಳಿ ಈ ಘಟನೆ ನಡೆದಿದೆ ಎಂದು ಅಥೆನ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಪಘಾತದಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.
ವಿಮಾನವು ಗಾಳಿಯಲ್ಲಿದ್ದಾಗ ಇಂಜಿನ್ ಆಫ್ ಆಗಿ ಬೆಂಕಿ ಹೊತ್ತಿಕೊಂಡಿತು. ಪತನಗೊಂಡಾಗ ಸ್ಥಳೀಯರಿಗೆ ದೊಡ್ಡ ಶಬ್ದ ಕೇಳಿಸಿತು. ಈ ವಿಮಾನವು ಉಕ್ರೇನಿಯನ್ ಕಂಪನಿಯ ಒಡೆತನದಲ್ಲಿದೆ. ಯುದ್ಧಪೀಡಿತ ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿತ್ತು. ಇದನ್ನು ಮೆರಿಡಿಯನ್ ಏರ್ ಕಾರ್ಗೋ ನಿರ್ವಹಿಸುತ್ತಿತ್ತು.
ಕಾರ್ಗೋ ವಿಮಾನವು ಸರ್ಬಿಯಾದಿಂದ ಜೋರ್ಡಾನ್ ಗೆ ಪ್ರಯಾಣಿಸುತ್ತಿತ್ತು. ತಾಂತ್ರಿಕ ದೋಷದಿಂದ ವಿಮಾನದ ಪೈಲಟ್ ಸಮೀಪದ ಕವಾಲಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವಂತೆ ಕೋರಿದ್ದರು. ಆದರೆ, ಅಲ್ಲಿಗೆ ತಲುಪುವ ಮುನ್ನವೇ ಅಪಘಾತಕ್ಕೀಡಾಯಿತು. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.